ನವದೆಹಲಿ: ಖಜುರಾಹೊದಲ್ಲಿ ವಿಷ್ಣುವಿನ ವಿಗ್ರಹಕ್ಕೆ ಸಂಬಂಧಿಸಿದಂತೆ ತಾನು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಟೀಕೆ ವ್ಯಕ್ತವಾಗುತ್ತಿದ್ದಂತೆ ಸುಪ್ರೀಂ ಕೋರ್ಟ್ (Supreme Court) ಮುಖ್ಯ ನ್ಯಾ. ಗವಾಯಿ (BR Gavai) ಅವರು ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.
ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ನಾನು ಮಾಡಿದ ಕಾಮೆಂಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಒಂದು ನಿರ್ದಿಷ್ಟ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಯಾರೋ ನನಗೆ ಹೇಳಿದರು. ಆದರೆ ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಹೇಳುವ ಮೂಲಕ ತಮ್ಮ ಅಭಿಪ್ರಾಯಕ್ಕೆ ಸ್ಪಷ್ಟನೆ ನೀಡಿದರು.
ಇಂದು ಪೀಠದ ಮುಂದೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕಳೆದ 10 ವರ್ಷಗಳಿಂದ ಸಿಜೆಐ ಗವಾಯಿ ಅವರನ್ನು ತಿಳಿದಿದ್ದೇನೆ ಮತ್ತು ಮುಖ್ಯ ನ್ಯಾಯಮೂರ್ತಿ ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನು ಗಂಭೀರ ಕಳವಳದ ವಿಷಯ ಎಂದು ಕರೆದ ಎಸ್‌ಜಿ ಮೆಹ್ತಾ, ಪ್ರತಿಯೊಂದು ಕ್ರಿಯೆಗೂ ಸಮಾನ ಪ್ರತಿಕ್ರಿಯೆ ಇರುತ್ತದೆ ಎಂಬ ನ್ಯೂಟನ್‌ನ ಚಲನೆಯ ನಿಯಮಗಳನ್ನು ನಾವು ಓದ್ದಿದ್ದೇವೆ. ಆದರೆ ಈಗ ಪ್ರತಿಯೊಂದು ಕ್ರಿಯೆಗೂ ಸಾಮಾಜಿಕ ಮಾಧ್ಯಮಗಳಲ್ಲಿ ಅಸಮಾನ ಪ್ರತಿಕ್ರಿಯೆ ಇರುತ್ತದೆ ಎಂದು ಹೇಳಿದರು.
ಅದೇ ಪೀಠದ ಮುಂದೆ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ನಾವು ಪ್ರತಿದಿನ ಈ ಸಾಮಾಜಿಕ ಮಾಧ್ಯಮಗಳಿಂದ ರೋಸಿ ಹೋಗಿದ್ದೇವೆ. ಈ ಹುಚ್ಚು ಕುದುರೆಯನ್ನು ಪಳಗಿಸಲು ಯಾವುದೇ ಮಾರ್ಗವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಸುಪ್ರೀಂ ಅಂಗಳಕ್ಕೆ ದಸರಾ ಉದ್ಘಾಟನೆ – ನಾಳೆ ತುರ್ತು ವಿಚಾರಣೆ
ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಸ್ಪಷ್ಟಪಡಿಸಿದ ನಂತರ ಸಿಜೆಐ ನೇಪಾಳದಲ್ಲಿ ನಡೆದ ಇತ್ತೀಚಿನ ಪ್ರತಿಭಟನೆಯನ್ನು ಉಲ್ಲೇಖಿಸಿ “ನೇಪಾಳದಲ್ಲೂ ಅದು ಹಾಗೆಯೇ ಆಯಿತು” ಎಂದು ಹೇಳಿದರು.
ಏನಿದು ಪ್ರಕರಣ?
ಮಧ್ಯಪ್ರದೇಶದ ಯುನೆಸ್ಕೋ ವಿಶ್ವ ಪರಂಪರೆಗೆ ಸೇರ್ಪಡೆಯಾಗಿರುವ ಖಜುರಾಹೊ ದೇವಾಲಯ ( Lord Vishnu Idol in Khajuraho) ಸಂಕೀರ್ಣದ ಭಾಗವಾಗಿರುವ ಜವಾರಿ ದೇವಾಲಯದಲ್ಲಿ ಏಳು ಅಡಿ ಎತ್ತರದ ವಿಷ್ಣುವಿನ ವಿಗ್ರಹವನ್ನು ಪುನರ್ನಿರ್ಮಿಸಲು ಮತ್ತು ಮರುಸ್ಥಾಪಿಸಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ಮಂಗಳವಾರ ಸಿಜೆಐ ಗವಾಯಿ ನೇತೃತ್ವದ ಪೀಠ ವಜಾಗೊಳಿಸಿತ್ತು.
ಈ ಪ್ರಕರಣ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಮೀಕ್ಷೆಯ (ASI) ವ್ಯಾಪ್ತಿಗೆ ಬರುತ್ತದೆಯೇ ಹೊರತು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಏನೇ ಮಾಡುವುದರಿದ್ದರೂ ಎಎಸ್‌ಐ ಅನುಮತಿ ನೀಡಬೇಕಾಗಿದೆ. ಕ್ಷಮಿಸಿ ಎಂದು ತಿಳಿಸಿದ್ದರು.
ಸಂಪೂರ್ಣವಾಗಿ ಪ್ರಚಾರ ಹಿತಾಸಕ್ತಿಗಾಗಿ ಈ ಅರ್ಜಿಯನ್ನು ನೀವು ಸಲ್ಲಿಕೆ ಮಾಡಿದ್ದೀರಿ. ಹೋಗಿ ದೇವರಲ್ಲೇ ಏನಾದರೂ ಮಾಡುವಂತೆ ಬೇಡಿಕೊಳ್ಳಿ. ನೀವು ವಿಷ್ಣುವಿನ ಕಟ್ಟಾ ಭಕ್ತ ಎಂದು ಹೇಳುತ್ತೀರಿ. ಆದ್ದರಿಂದ ಈಗಲೇ ಹೋಗಿ ಪ್ರಾರ್ಥಿಸಿ ಮತ್ತು ಸ್ವಲ್ಪ ಧ್ಯಾನ ಮಾಡಿ ಎಂದು ಸಿಜೆಐ ಗವಾಯಿ ಹೇಳಿದ್ದರು.
ಮೊಘಲ್ ಆಕ್ರಮಣದ ಸಮಯದಲ್ಲಿ ವಿಗ್ರಹವು ವಿರೂಪಗೊಂಡಿದ್ದು, ಅದನ್ನು ಪುನಃಸ್ಥಾಪಿಸಲು ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದರೂ ಅದು ಅದೇ ಸ್ಥಿತಿಯಲ್ಲಿದೆ ಎಂದು ರಾಕೇಶ್ ದಲಾಲ್ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.