ಅರುಣ್ ಜೇಟ್ಲಿ ಆರ್ಥಿಕ ನೀತಿ ಟೀಕಿಸಿ ಲೇಖನ ಬರೆದ ಯಶವಂತ್ ಸಿನ್ಹಾ

Public TV
2 Min Read
arun jailty and yashwanth sinha

ನವದೆಹಲಿ: ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಬಿಜೆಪಿಯ ಹಿರಿಯ ಮುಖಂಡ, ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಟೀಕಿಸಿ ಲೇಖನ ಬರೆದಿದ್ದಾರೆ.

ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಂದಾಗಿ ದೇಶದ ಅರ್ಥ ವ್ಯವಸ್ಥೆ ಹದಗೆಟ್ಟಿದೆ ಎಂದು ಇಂಡಿಯನ್ಸ್ ಎಕ್ಸ್ ಪ್ರೆಸ್ ಪತ್ರಿಕೆಗೆ ಯಶವಂತ್ ಸಿನ್ಹಾ ಲೇಖನ ಬರೆದಿದ್ದು, “ಈಗಲೂ ನಾನು ಮಾತನಾಡದೇ ಇದ್ದರೆ ದೇಶದ ಕರ್ತವ್ಯವವನ್ನು ನಿಭಾಯಿಸಲು ವಿಫಲನಾದಂತೆ” ಎಂದು ಬರೆದುಕೊಂಡಿದ್ದಾರೆ.

ನಾವು ವಿರೋಧ ಪಕ್ಷದಲ್ಲಿದ್ದಾಗ ರೈಡ್ ರಾಜ್(ತನಿಖಾ ಸಂಸ್ಥೆಗಳು ನಡೆಸುವ ದಾಳಿ) ಖಂಡಿಸಿದ್ದೇವು. ಆದರೆ ಈಗ ದಾಳಿ ಎನ್ನುವುದು ದೈನಂದಿನ ಚಟುವಟಿಕೆಯಾಗಿದೆ. ಪ್ರತಿ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಕಡಿಮೆಯಾಗುತ್ತಿದೆ. ಕೈಗಾರಿಕಾ ಉತ್ಪಾದನೆ ಕುಂಠಿತವಾಗಿದೆ. ಕೃಷಿ ಬೆಳವಣಿಗೆ ಆಗುತ್ತಿಲ್ಲ. ಖಾಸಗಿ ವಲಯದಲ್ಲಿ ಹೂಡಿಕೆ ಕಡಿಮೆ ಆಗುತ್ತಿದೆ. ಸೇವಾ ವಲಯದಲ್ಲೂ ಪ್ರಗತಿ ಕಾಣುತ್ತಿಲ್ಲ. ಕೆಟ್ಟದಾಗಿ ತಂದಿರುವ ಜಿಎಸ್‍ಟಿಯಿಂದ ದೇಶದ ಅರ್ಥ ವ್ಯವಸ್ಥೆ ಕುಸಿಯುತ್ತಿದೆ ಎಂದು ಹೇಳಿದ್ದಾರೆ.

ಸರ್ಕಾರದ ಅಧಿಕಾರಿಗಳು ನೋಟು ರದ್ಧತಿಯಿಂದ ಸಮಸ್ಯೆ ಆಗಿಲ್ಲ ಎಂದು ಹೇಳುತ್ತಾರೆ. ಆದರೆ ಆರ್ಥಿಕ ಸಮಸ್ಯೆ ಬಹಳ ಹಿಂದೆಯೇ ಶುರುವಾಗಿತ್ತು. ಈ ಬೆಂಕಿಗೆ ನೋಟು ರದ್ದತಿ ತುಪ್ಪ ಸುರಿದಂತೆ ಆಯಿತು ಎಂದು ಬರೆದಿದ್ದಾರೆ.

ಅಮೃತಸರ ಲೋಕಸಭಾ ಕ್ಷೇತ್ರದಲ್ಲಿ ಅರುಣ್ ಜೇಟ್ಲಿ ಸೋತಿದ್ದರೂ ಅವರನ್ನು ರಾಜ್ಯಸಭೆಗೆ ಆರಿಸಿ ಹಣಕಾಸು ಸಚಿವರನ್ನಾಗಿಸಿದ ನಡೆಯನ್ನು ಅವರು ಲೇಖನಲ್ಲಿ ಉಲ್ಲೇಖಿಸಿದ್ದಾರೆ. ಈ ಸಮಯದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಜಸ್ವಂತ್ ಸಿಂಗ್ ಮತ್ತು ಪ್ರಮೋದ್ ಮಹಾಜನ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ್ದರು ಎಂದು ಅಭಿಪ್ರಾಯವನ್ನು ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗುತ್ತಿದ್ದು, ಲಕ್ಷಾಂತರ ಕೋಟಿ ರೂ. ಲಾಭವಾಗುತ್ತಿರುವ ಸಂದರ್ಭದಲ್ಲಿ ಅರುಣ್ ಜೇಟ್ಲಿ ಹಣಕಾಸು ಸಚಿವರಾಗಿರುವುದು ಅವರ ಅದೃಷ್ಟ. ಆದರೆ ಈ ಸುವರ್ಣ ಅವಕಾಶವನ್ನು ಜೇಟ್ಲಿ ಹಾಳು ಮಾಡಿದ್ದಾರೆ ಎಂದು ಸಿನ್ಹಾ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

2015ರಲ್ಲಿ ಜಿಡಿಪಿ ಅಳೆಯುವ ಮಾನದಂಡ ಬದಲಾಗಿದೆ. ಒಂದು ವೇಳೆ ಈ ಹಿಂದಿನಂತೆ ಜಿಡಿಪಿ ಲೆಕ್ಕಾಚಾರ ಹಾಕಿದರೆ ಶೇ. 5.7ರ ಪ್ರಗತಿ ದರದ ಬದಲಾಗಿ ಶೇ.3.7 ಅಥವಾ ಅದಕ್ಕಿಂತಲೂ ಕಡಿಮೆ ಪ್ರಗತಿ ದರ ಇರಬಹುದು ಎಂದು ಅವರು ಅಂದಾಜಿಸಿದ್ದಾರೆ.

ಯಶವಂತ ಸಿನ್ಹಾ ಅವರು ಮೋದಿ ಸೇರಿದಂತ ಪಕ್ಷದ ನಾಯಕರನ್ನು ಟೀಕಿಸುವುದು ಇದೆ ಮೊದಲಲ್ಲ. 2014ರ ಲೋಕಸಭಾ ಚುನಾವಣೆಗಾಗಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲಾದ ಬಳಿಕ ಹಿರಿಯ ಬಿಜೆಪಿ ನಾಯಕರಾದ ಎಲ್ ಕೆ ಆಡ್ವಾಣಿ, ಯಶವಂತ್ ಸಿನ್ಹಾ ಮತ್ತು ಮುರಳಿ ಮನೋಹರ ಜೋಷಿ ಅವರು ಪಕ್ಷದ ನಾಯಕತ್ವವನ್ನು ಹಲವು ಸಂದರ್ಭಗಳಲ್ಲಿ ಟೀಕಿಸಿದ್ದರು.

ತಮ್ಮ ಸಚಿವ ಸಂಪುಟ ಸೇರ್ಪಡೆಗೆ ಸಚಿವರ ಗರಿಷ್ಠ ವಯೋಮಿತಿಯನ್ನು 75ಕ್ಕೆ ಸೀಮಿತಗೊಳಿಸಿದ್ದಕ್ಕೆ ಯಶವಂತ್ ಸಿನ್ಹಾ, ಈಗಿನ ಸರ್ಕಾರ 75 ದಾಟಿದವರನ್ನು “ಬ್ರೇನ್ ಡೆಡ್ ಎಂದು ಡಿಕ್ಲೇರ್ ಮಾಡಿದೆ”ಎಂದು ಲೇವಡಿ ಮಾಡಿದ್ದರು.

ಯಶವಂತ್ ಸಿನ್ಹಾ ಸಹಿತ ಹಲವು ಹಿರಿಯ ಬಿಜೆಪಿ ನಾಯಕರನ್ನು ಮೂಲೆ ಗುಂಪು ಮಾಡಿ ‘ಮಾರ್ಗದರ್ಶಕ ಮಂಡಳಿ’ಯ ಸದಸ್ಯರನ್ನಾಗಿ ನೇಮಿಸಿದ್ದಾರೆ ಎನ್ನುವ ಆರೋಪ ಮೋದಿ ಮೇಲಿದೆ. ಸಿನ್ಹಾ ಅವರು ಮಾರ್ಗದರ್ಶಕ ಮಂಡಳಿಯನ್ನು ಆನೇಕ ಬಾರಿ ಲೇವಡಿ ಮಾಡಿ ಮಾತನಾಡಿದ್ದರು.

 

 

Share This Article
Leave a Comment

Leave a Reply

Your email address will not be published. Required fields are marked *