ಬೆಂಗಳೂರು: ಆರ್.ಚಂದ್ರು ಶ್ರದ್ಧೆ, ಅಚ್ಚುಕಟ್ಟುತನ ಮತ್ತು ಕ್ರಿಯೇಟಿವಿಟಿಗೆ ಹೆಸರಾದ ನಿರ್ದೇಶಕ. ವರ್ಷಕ್ಕೊಂದು ಚಿತ್ರ ಮಾಡಿದರೂ ಅದು ವರ್ಷದ ಚಿತ್ರವಾಗಿ ದಾಖಲಾಗುವಂಥಾ ಚೆಂದದ ದೃಶ್ಯಕಾವ್ಯಗಳೇ ಅವರ ಬತ್ತಳಿಕೆಯಲ್ಲಿವೆ. ಆ ಸಾಲಿಗೆ ಐ ಲವ್ ಯೂ ಚಿತ್ರವೂ ಸೇರ್ಪಡೆಗೊಂಡಿದೆ. ಚಂದ್ರು ಅವರು ಐ ಲವ್ ಯೂ ಅಂದ ರೀತಿಗೆ ಪ್ರೇಕ್ಷಕರೆಲ್ಲ ಬೊಗಸೆ ತುಂಬ ಪ್ರೀತಿ ತುಂಬಿದ್ದಾರೆ. ಈ ಕಾರಣದಿಂದಲೇ ನಾಡಿನಾದ್ಯಂತ ಐ ಲವ್ ಯೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಾ ಮುಂದುವರೆಯುತ್ತಿದೆ.
Advertisement
ಯುವ ಸಮೂಹವನ್ನು ಸೆಳೆಯುವಂಥಾ ಕಥೆಯೊಂದನ್ನು ಫ್ಯಾಮಿಲಿ ಸಮೇತ ಕೂತು ನೋಡುವಂತೆ ಕಟ್ಟಿ ಕೊಡುವುದೂ ಒಂದು ಕಲೆಗಾರಿಕೆ. ಅದು ಕೆಲವೇ ಕೆಲ ನಿರ್ದೇಶಕರಿಗೆ ಮಾತ್ರವೇ ಸಿದ್ಧಿಸಿರುತ್ತದೆ. ಆ ಸಾಲಿನಲ್ಲಿ ಆರ್.ಚಂದ್ರು ಕೂಡಾ ಸೇರಿಕೊಳ್ಳುತ್ತಾರೆ. ಐ ಲವ್ ಯೂ ಕಥೆಯಲ್ಲಿಯೇ ಅಂಥಾದ್ದೊಂದು ಕಲಾತ್ಮಕ ಜಾಣ್ಮೆಯನ್ನು ಚಂದ್ರು ಪ್ರದರ್ಶಿಸಿದ್ದಾರೆ. ಅದಕ್ಕೆ ಫ್ಯಾಮಿಲಿ ಪ್ರೇಕ್ಷಕರೂ ಸೇರಿದಂತೆ ಯುವ ಸಮೂಹ ಫಿದಾ ಆಗಿ ಬಿಟ್ಟಿದೆ.
Advertisement
Advertisement
ಆರಂಭ ಕಾಲದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರೇಮದ ಫಿಲಾಸಫಿಯ ಮಾಸ್ ಡೈಲಾಗುಗಳನ್ನು ಕೇಳಿ, ಕೆಲ ದೃಶ್ಯಾವಳಿಗಳನ್ನು ಕಂಡು ಆರ್. ಚಂದ್ರು ಈ ಸಿನಿಮಾ ಮೂಲಕ ಹೊಸ ಜಾಡಿನಲ್ಲಿ ಹೆಜ್ಜೆಯಿಟ್ಟಿದ್ದಾರಾ ಎಂಬ ಕುತೂಹಲ ಕಾಡಿದ್ದು ನಿಜ. ಖಂಡಿತವಾಗಿಯೂ ಅವರು ಕಥೆಯ ಮೂಲಕ ಎಂದಿನಂತೆ ಹೊಸ ಹಾದಿ ಹಿಡಿದಿದ್ದಾರೆ. ಪ್ರೀತಿಯ ರಸಪಾಕವನ್ನು ಕುಟುಂಬ ಸಮೇತರಾಗಿ ಕೂತು ನೋಡುವಂಥಾ ರೀತಿಯಲ್ಲಿ ಕಟ್ಟಿ ಕೊಟ್ಟಿದ್ದಾರೆ. ಒಂದೇ ಒಂದು ದೃಶ್ಯವೂ ಅಶ್ಲೀಲ ಅನ್ನಿಸದಂತೆ, ಮಾಸ್ ಡೈಲಾಗುಗಳೂ ಮುಜುಗರ ಹುಟ್ಟಿಸದಂತೆ, ಇಡೀ ಕಥೆ ನೋಡುಗರ ಕುತೂಹಲವನ್ನು ಒಂದಿನಿತೂ ಸಡಿಲಗೊಳಿಸದಂತೆ ಈ ಚಿತ್ರವನ್ನವರು ಕಣ್ಣಲ್ಲಿ ಕಣ್ಣಿಟ್ಟು ರೂಪಿಸಿದ್ದಾರೆ.
Advertisement
ಈ ಅಚ್ಚುಕಟ್ಟುತನ, ಕ್ರಿಯೇಟಿವಿಟಿಗಳೆಲ್ಲವೂ ನಿರೀಕ್ಷೆಯನ್ನೂ ಮೀರಿ ವರ್ಕೌಟ್ ಆಗಿವೆ. ಪ್ರೀತಿ ಪ್ರೇಮದ ಆವೇಗದಲ್ಲಿ ಚಲಿಸುತ್ತಲೇ ಬದುಕಿನ ವಾಸ್ತವವನ್ನು ತೆರೆದಿಡುತ್ತಾ ಘನವಾದೊಂದು ಸಂದೇಶ ಸಾರುವ ಈ ಚಿತ್ರ ಒಂದು ಹಂತದಲ್ಲಿ ನೋಡುಗರ ಕಣ್ಣಂಚನ್ನು ತೇವಗೊಳಿಸುತ್ತದೆ. ಇಂಥಾ ಮೋಹಕ ಅನುಭವಕ್ಕಾಗಿ ಈ ಚಿತ್ರವನ್ನೊಮ್ಮೆ ಕಣ್ತುಂಬಿಕೊಳ್ಳಲೇಬೇಕೆಂದು ನೋಡಿದ ಪ್ರೇಕ್ಷಕರೇ ಶಿಫಾರಸು ಮಾಡುತ್ತಿದ್ದಾರೆ. ಐ ಲವ್ ಯೂಗೆ ಪುಷ್ಕಳ ಗೆಲುವು ಸಿಗಲು ಇದಕ್ಕಿಂತ ಬೇರೇನು ಬೇಕು?