ಕಲಬುರಗಿ: ಉತ್ತರ ಪ್ರದೇಶದ ಕಾನಪುರನಲ್ಲಿ ಆರಂಭವಾದ ಐ ಲವ್ ಮೊಹಮ್ಮದ್ ಬ್ಯಾನರ್ (I Love Muhammad Banner) ಸಾಕಷ್ಟು ವಿವಾದ ಸೃಷ್ಟಿಸಿದ್ದು, ಇದೀಗ ಈ ಐ ಲವ್ ಮೊಹಮದ್ ಎಂಬ ಬ್ಯಾನರ್ ಕಲಬುರಗಿಗೂ (Kalaburagi) ಕಾಲಿಟ್ಟಿದೆ.
ವೈದ್ಯಕೀಯ ಶಿಕ್ಷಣ ಸಚಿವರ ತವರು ಕ್ಷೇತ್ರವಾದ ಜಿಲ್ಲೆಯ ಸೇಡಂ (Sedam) ತಾಲೂಕಿನ ಊಡಗಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಐ ಲವ್ ಬ್ಯಾನರ್ ಕಂಡು ಬಂದಿದ್ದು, ವಿವಿಧ ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯ ಸೇಡಂ ತಾಲೂಕಿನ ಊಡಗಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಐ ಲವ್ ಮೊಹಮದ್ ಬ್ಯಾನರ್ ಅಳವಡಿಕೆ ಮಾಡಿದ್ದರಿಂದ ಕೆಲ ಹಿಂದೂ ಸಂಘಟನೆಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಧಾರವಾಡದಲ್ಲೊಂದು ಅಚ್ಚರಿ ಪಕ್ರರಣ – ನವಜಾತ ಗಂಡು ಶಿಶುವಿನೊಳಗೆ ಮತ್ತೊಂದು ಶಿಶು ಪತ್ತೆ
ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದ್ದು, ಹಿಂದೂ ಸಮಾಜವನ್ನು ಏನು ಮಾಡಲು ಹೊರಟಿದ್ದೀರಾ ಎಂದು ಹಿಂದೂ ಸಂಘಟನೆಗಳು ಕಿಡಿಕಾರಿವೆ. ಬ್ಯಾನರ್ ಅಳವಡಿಕೆ ವಿಚಾರ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸ್ ಇಲಾಖೆ, ತಕ್ಷಣವೇ ಐ ಲವ್ ಮೊಹಮದ್ ಬ್ಯಾನರ್ ಅನ್ನು ತೆರವು ಮಾಡಿದೆ.