ಹುಬ್ಬಳ್ಳಿ: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ನಾವು ಹೋರಾಟ ಮಾಡಿದ್ದು ದೊಡ್ಡ ಅಪರಾಧವಾಗಿದೆ. ಕೆಲವು ಉಡಾಫೆ ಸ್ವಾಮೀಜಿಗಳು ಧರ್ಮ ಒಡೆಯುತ್ತಾರೆಂಬ ವದಂತಿ ಹಬ್ಬಿಸಿದರು. ಹೀಗಾಗಿ ಸಚಿವ ಸ್ಥಾನ ಕೈತಪ್ಪಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಪಬ್ಲಿಕ್ ಟಿವಿ ಯೊಂದಿಗೆ ಮಾತನಾಡಿದ ಅವರು, ನಾನು ಲಿಂಗಾಯತ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದೆ. ಪಕ್ಷಕ್ಕೆ ಅಂಟಿಕೊಂಡು ಲಿಂಗಾಯತ ಹೋರಾಟ ಮಾಡಿಲ್ಲ. ಅಲ್ಲದೇ ಈ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ದೇವೇಗೌಡರಿಗೂ ಸ್ಪಷ್ಟಪಡಿಸಿದ್ದೆ. ಸಚಿವ ಸ್ಥಾನ ಹಂಚಿಕೆಯ ಬೆಳವಣಿಗೆ ಗಮನಿಸಿದಾಗ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವೇ ನೇರ ಹೊಣೆ ಎನ್ನುವುದು ಅರ್ಥವಾಗುತ್ತಿದೆ ಎಂದು ವಿಷಾದ ವ್ಯಕ್ತಪಡೆಸಿದರು.
Advertisement
Advertisement
ಕೆಲವರು ರಂಪಾಟ-ಪ್ರತಿಭಟನೆ ಮಾಡಿ, ಕಾಡಿ-ಬೇಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನನಗೆ ಹಾಗೆ ಮಾಡಲಿಕ್ಕೆ ಮನಸ್ಸು ಬರಲಿಲ್ಲ. ಅನೇಕರು ಫೋನ್ ಕರೆ ಮಾಡಿ, ನಿಮ್ಮಂತ ಅನುಭವಿಗಳು ಸಚಿವ ಸಂಪುಟದಲ್ಲಿ ಇರಬೇಕಿತ್ತೆಂದು ಹೇಳುತ್ತಾರೆ. ಆದರೆ ಸಚಿವ ಸ್ಥಾನ ನೀಡುವವರೇ ನನ್ನನ್ನು ಮಂತ್ರಿ ಮಾಡಿಲ್ಲ. ಪಕ್ಷದ ರಾಷ್ಟ್ರಾಧ್ಯಕ್ಷರಾದ ದೇವೇಗೌಡ ತಿರ್ಮಾನವೇ ಅಂತಿಮ. ವಿಧಾನ ಪರಿಷತ್ ಸಭಾಪತಿ ಮಾಡುವುದು, ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು ಎಂದು ಮತ್ತೊಂದು ಆಶಯ ಹೊರ ಹಾಕಿದ್ದಾರೆ.