ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಹಲವು ದಿನಗಳ ನಂತರ ಮಾಧ್ಯಮಗಳ ಮುಂದೆ ಮುಖಾಮುಖಿಯಾಗಿದ್ದಾರೆ ನಟ ನಾಗಭೂಷಣ್. ಘಟನೆ ನಡೆದ ನಂತರ ಮಾನಸಿಕವಾಗಿ ತುಂಬಾ ನೊಂದುಕೊಂಡಿದ್ದೆ. ಹಾಗಾಗಿ ನನ್ನ ಪ್ರತಿಕ್ರಿಯೆಯನ್ನು ನೀಡಲು ಆಗಲಿಲ್ಲ ಎಂದ ಅವರು, ಆ ನೋವಿನಿಂದ ಹೊರ ಬರುವುದಕ್ಕೂ ಇನ್ನೂ ನನಗೆ ತುಂಬಾ ಸಮಯ ಬೇಕು. ಅದು ಹಿಟ್ ಅಂಡ್ ರನ್ ಕೇಸ್ ಅಲ್ಲ, ನಾನು ಅಲ್ಲಿಯೇ ಇದ್ದೆ. ಕಾನೂನು ಪ್ರಕ್ರಿಯೆಗೆ ಸಹಕರಿಸಿದ್ದೇನೆ ಎಂದಿದ್ದಾರೆ.
Advertisement
ನಾಗಭೂಷಣ್ ಅವರ ತಂದೆ ಇಂಥದ್ದೇ ಅಪಘಾತದಲ್ಲಿ ನಿಧನರಾಗಿದ್ದು, ಈವರೆಗೂ ಆ ಅಪಘಾತ ಮಾಡಿದವರು ಯಾರು ಎನ್ನುವುದು ಗೊತ್ತಿಲ್ಲ. ‘ಗೌರಿ ಹಬ್ಬದ ದಿನದಂದು ನನ್ನ ತಂದೆಯು ಇಂಥದ್ದೇ ಕಾರು ಅಪಘಾತದಲ್ಲಿ ನಿಧನರಾದರು. ಅದನ್ನು ಮಾಡಿದ್ದು ಯಾರು ಎನ್ನುವುದು ಈವರೆಗೂ ನಮಗೆ ಗೊತ್ತಿಲ್ಲ. ಅಪಘಾತ ಮಾಡಿದ ನಂತರ ಯಾರೂ ಓಡಿ ಹೋಗಬೇಡಿ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ. ನನ್ನ ತಂದೆಯ ಘಟನೆಯಿಂದ ನಾನು ಕಲಿತದ್ದು ಇದನ್ನೆ’ ಅಂದರು.
Advertisement
Advertisement
ಏನಿದು ಪ್ರಕರಣ?
Advertisement
ಅಕ್ಟೋಬರ್ 30ರಂದು ರಾತ್ರಿ 9 ಗಂಟೆಯ ಹೊತ್ತಿಗೆ ಕುಮಾರಸ್ವಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾರು ಅಪಘಾತದಲ್ಲಿ (Car accident) ಪ್ರೇಮಾ ಎನ್ನುವ ಮಹಿಳೆ ಸಾವನ್ನಪ್ಪಿ, ಅವರ ಪತಿ ಗಂಭೀರವಾಗಿ ಗಾಯಗೊಂಡಿದ್ದರು. ಪತಿ ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ನಾಗಭೂಷಣ್ (Nagbhushan) ಈ ಅಪಘಾತಕ್ಕೆ ಕಾರಣವಾಗಿದ್ದು, ನಟನನ್ನು ಕುಮಾರಸ್ವಾಮಿ ಪೋಲಿಸರು ಬಂಧಿಸಿ ನಂತರ ಸ್ಟೇಶನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ಈ ಘಟನೆಯ ಕುರಿತು ಸ್ವತ ನಾಗಭೂಷಣ್ ಕೂಡ ಪೊಲೀಸರ ಮುಂದೆ ಹೇಳಿಕೆಯನ್ನು ದಾಖಲಿಸಿದ್ದರು.
ರಾತ್ರಿ ಸ್ನೇಹಿತರನ್ನು ಭೇಟಿ ಮಾಡಲು ಆರ್.ಆರ್ ನಗರಕ್ಕೆ ಹೋಗಿರುವುದಾಗಿ, ಅಲ್ಲಿಂದ ಜೆಪಿ ನಗರದಲ್ಲಿರುವ ತಮ್ಮ ಮನೆಗೆ ವಾಪಸ್ಸಾಗುವಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ನಾಗಭೂಷಣ್ ತಿಳಿಸಿದ್ದರು. ತಾವೇ ಸ್ವತಃ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಅಪಾರ್ಟಮೆಂಟ್ ಹತ್ತಿರ ಒಬ್ಬ ಮಹಿಳೆ ಮತ್ತು ಒಬ್ಬರು ವ್ಯಕ್ತಿ ಫುಟ್ ಪಾತ್ ಮೇಲಿಂದ ರಸ್ತೆಗೆ ಕೆಳಗೆ ಇಳಿದು ರಸ್ತೆಗೆ ಬಂದರು. ಅವರು ಬಂದಿದ್ದನ್ನು ನೋಡಿ ನನಗೆ ಗಾಬರಿಯಾಗಿ ರಸ್ತೆಗೆ ಬಂದಿದ್ದವರಿಗೆ ಡಿಕ್ಕಿ ಮಾಡಿ, ನಂತರ ಫುಟ್ ಪಾತ್ ಮೇಲೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಮಾಡಿದೆನು ಎಂದು ಅವರು ಹೇಳಿಕೆಯನ್ನು ನೀಡಿದ್ದರು.
ಈ ಘಟನೆಯಾದಾಗ ಮಹಿಳೆಗೆ ತಲೆಗೆ ಮತ್ತು ಮುಖಕ್ಕೆ ಜಾಸ್ತಿ ಏಟಾಗಿತ್ತು. ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಗಂಡಸಿಗೆ ಕಾಲುಗಳಿಗೆ ಮತ್ತು ಹೊಟ್ಟೆ ಹಾಗೂ ತಲೆಗೆ ಗಾಯವಾಗಿತ್ತು. ನನ್ನ ಕಾರು ಸ್ಟಾರ್ಟ್ ಆಗದೇ ಇರುವ ಕಾರಣಕ್ಕಾಗಿ ಆಟೋದಲ್ಲಿ ಅವರನ್ನು ಸ್ವತಃ ನಾನೇ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಆಸ್ಪತ್ರೆಯ ವೈದ್ಯರು ಮಾರ್ಗಮಧ್ಯದಲ್ಲೇ ಮಹಿಳೆಯು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ಘಟನೆಯನ್ನು ತಿಳಿದು ಸಂಚಾರಿ ಪೊಲೀಸರು ಆಸ್ಪತ್ರೆಗೆ ಬಂದರು. ನಾನು ಕೂಡ ಅವರೊಂದಿಗೆ ಕುಮಾರಸ್ವಾಮಿ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದೆ ಎಂದು ತಮ್ಮ ಹೇಳಿಕೆಯನ್ನು ನಾಗಭೂಷಣ್ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ತನಿಖೆ ನಡೆಯುತ್ತಿದೆ.
Web Stories