ರಾಯಚೂರು: ಪೇಜಾವರ ಶ್ರೀಗಳ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ. ಅವರು ಕೃಷ್ಣೈಕ್ಯರಾಗಿರುವ ಬಗ್ಗೆ ತಿಳಿದು ಆಘಾತವಾಗಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಶ್ರೀಗಳು ಕಂಬನಿ ಮಿಡಿದಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಸುಬುಧೇಂದ್ರತೀರ್ಥ ಶ್ರೀಗಳು, ಪೇಜಾವರ ಶ್ರೀಗಳ ಅಗಲಿಕೆಯಿಂತ ಆಘಾತವಾಗಿದೆ. ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ. ಅವರು ಕಿರಿಯ ವಯಸ್ಸಿನಲ್ಲೇ ಸಾಮಾಜಕ್ಕಾಗಿ ವಿಶೇಷ ಕಾಳಜಿ ವಹಿಸಿದ್ದರು. ಅಲ್ಲದೆ ದೇಶದ ವಿವಿಧ ಸಂದರ್ಭದಲ್ಲಿ ರಾಜಕೀಯ ವ್ಯಕ್ತಿಗಳಿಗೆ ಧಾರ್ಮಿಕವಾಗಿ ಸಲಹೆ ಸೂಚನೆಗಳನ್ನ ನೀಡಿ ದೇಶದ ಅಭಿವೃದ್ಧಿಗೆ, ಒಳಿತಿಗೆ ಶ್ರೀಗಳು ತಮ್ಮ ಅಮೂಲ್ಯ ಸೇವೆ ಸಲ್ಲಿಸಿರುವವರು ಎಂದು ಪೇಜಾವರ ಶ್ರೀಗಳ ಸೇವೆಯನ್ನು ನೆನೆದರು. ಇದನ್ನೂ ಓದಿ: ಹರ್ನಿಯಾ ಆಪರೇಷನ್ ನಡೆದಾಗಲೇ ಕೊನೆಯಾಸೆ ಬಿಚ್ಚಿಟ್ಟಿದ್ದ ಪೇಜಾವರ ಶ್ರೀ
Advertisement
Advertisement
ಮಂತ್ರಾಲಯ ಮಠಕ್ಕೂ ಪೇಜಾವರ ಮಠಕ್ಕೂ ಸುಮಾರು 5 ತಲೆಮಾರಿನ ಸಂಬಂಧವಿದೆ. ನಮ್ಮ ಬಾಲ್ಯದಿಂದಲೂ ಪೇಜಾವರ ಶ್ರೀಗಳ ಜೊತೆ ತುಂಬಾ ಒಡನಾಟವಿತ್ತು. ಪೂರ್ವಾಶ್ರಮದಲ್ಲಿದ್ದಾಗ ಅವರ ಜೊತೆ ಅನುಬಂಧ ಹೆಚ್ಚಿತ್ತು. ಅವರ ಈ ಇಹಲೋಕ ಯಾತ್ರೆ ಪೂರ್ಣವಾಗಿರುವುದನ್ನ ಜೀರ್ಣಿಸಿಕೊಳ್ಳಲು ನಮಗೆ ಕಷ್ಟವಾಗುತ್ತಿದೆ ಎಂದು ದು:ಖ ವ್ಯಕ್ತಪಡಿಸಿದರು. ಇದನ್ನೂ ಓದಿ: 8ನೇ ವಯಸ್ಸಿನಲ್ಲಿ ದೀಕ್ಷೆ, ದಲಿತ ಪರ ಹೋರಾಟ, 5ನೇ ಬಾರಿ ಪರ್ಯಾಯ ಪೀಠ ಏರಿ ಸಾಧನೆ
Advertisement
ಪೇಜಾವರ ಶ್ರೀಗಳು ಇಲ್ಲದೇ ಶ್ರೀ ಮಠದ ಕಾರ್ಯಕ್ರಮ ಮಾಡಿದ್ದೇ ಇಲ್ಲ. ಕೆಲ ದಿನಗಳ ಹಿಂದೆ ರಾಯಚೂರಿನಲ್ಲಿ ನಡೆದ ಕಾರ್ಯಕ್ರಮಗಳಿಗೆ ಪೇಜಾವರ ಶ್ರೀಗಳು ಮುಖ್ಯ ಅತಿಥಿಗಳಾಗಿ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ವೇಳೆ ಸಮಾಜದ ಬಗ್ಗೆ ಅನೇಕ ಹಿತ ನುಡಿಗಳನ್ನು ನಮಗೆ ತಿಳಿಸಿದ್ದರು. ಅವರು ಯಾವಾಗಲೂ ಹಿಂದೂ ಸಂಘಟನೆ, ಸಮಾಜದ ವಿಚಾರದಲ್ಲಿ ನಮಗೆ ನೀವು ಉತ್ತರಾಧಿಕಾರಿಗಳು ಇದ್ದಂತೆ ಎಂದು ಅವರು ಬಹಿರಂಗವಾಗಿ ಘೋಷಿಸಿದ್ದನ್ನ ಸುಬುಧೇಂದ್ರತೀರ್ಥ ಶ್ರೀಗಳು ಸ್ಮರಿಸಿದರು.
Advertisement
ಇಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಅವರು ಉಡುಪಿಗೆ ಹೋದಾಗ ಶ್ರೀಗಳಿಗೆ ಅನಾರೋಗ್ಯ ಕಾಡಿತ್ತು. ಆಗ ನಾವು ಕೂಡ ಉಡುಪಿ ಮಠಕ್ಕೆ ತೆರೆಳಿ ಶ್ರೀಗಳನ್ನು ಭೆಟಿ ಮಾಡಿ, ಆರೋಗ್ಯ ವಿಚಾರಿಸಿದ್ದೆವು. ರಾಜ್ಯದಲ್ಲೆಡೆ ಇರುವ ನಮ್ಮ ಶ್ರೀಮಠದ ಶಾಖಾ ಮಠಗಳಲ್ಲಿ ಅವರ ಆರೋಗ್ಯ ಸುಧಾರಣೆಗೆ ಹೋಮ, ಹವನ, ಪ್ರಾರ್ಥನೆ ಮಾಡಿಸಿದ್ದೆವು. ಪೇಜಾವರ ಶ್ರೀಗಳನ್ನು ಆಸ್ಪತ್ರೆಯಿಂದ ಉಡುಪಿ ಮಠಕ್ಕೆ ಕರೆತರುವಾಗ ವರುಣ ದೇವ ಕೂಡ ಹನಿ ಹನಿ ಮಳೆ ಸುರಿಸಿದನು. ಇದು ಶ್ರೀಗಳ ತಪಸ್ಸು, ಸಾಧನೆ, ಒಳ್ಳೆತನಕ್ಕೆ ಸಾಕ್ಷಿ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗ್ಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಅಂತ್ಯಸಂಸ್ಕಾರ
ಪೇಜಾವರ ಶ್ರೀಗಳಿಗೆ ಮುಖ್ಯವಾಗಿ ನಮ್ಮ ಹಿಂದೂ ಸಂಸ್ಕೃತಿ, ಸಮಾಜ ಸುಧಾರಣೆಗೊಳ್ಳಬೇಕು ಎಂಬ ಆಸೆ ಇತ್ತು. ಅದೇರೀತಿ ರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು. ಎಲ್ಲೆಡೆ ಶಾಂತಿ ನೆಲೆಗೊಳ್ಳಬೇಕು, ಮತ-ಮತಗಳ ಸಾಮರಸ್ಯ ಉಂಟಾಗಬೇಕು ಎನ್ನುವ ಹಲವು ಸಾಮಾಜಿಕ ಕಳಕಳಿಗಳ ಬಗ್ಗೆ ಶ್ರೀಗಳು ತಿಳಿಸಿದ್ದರು. ನಾವೆಲ್ಲರೂ ಅವರ ಅಭಿಮಾನಿಗಳು, ಅವರ ಒಡನಾಟ ಇರುವಂತವರು. ಅವರಿಂದ ಸಹಾಯ ಪಡೆದಂತಹ ಪ್ರತಿಯೊಬ್ಬರು ಕೂಡ ಅವರ ಆಶಯಗಳ ಬಗ್ಗೆ, ಅನಿಸಿಕೆಗಳ ಬಗ್ಗೆ, ಯೋಜನೆಗಳ ಬಗ್ಗೆ ಎಲ್ಲರೂ ಕೂಡಿ ಹೆಜ್ಜೆ ಇಟ್ಟಾಗ ಅವರ ಆತ್ಮಕ್ಕೆ ಸಂತೋಷವಾಗುತ್ತದೆ ಎಂದು ಪೇಜಾವರ ಶ್ರೀಗಳ ಸೇವೆ, ಆಸೆಗಳ ಬಗ್ಗೆ ಸುಬುಧೇಂದ್ರತೀರ್ಥ ಶ್ರೀಗಳು ಹಂಚಿಕೊಂಡರು.