ಹಾಸನ: ರಾಜ್ಯಕ್ಕೆ ಅಮಿತ್ ಶಾ, ರಾಹುಲ್ ಗಾಂಧಿ ಯಾರೇ ಬರಲಿ ಎರಡೂ ರಾಜಕೀಯ ಪಕ್ಷಗಳನ್ನು ಎದುರಿಸುವ ಶಕ್ತಿ ನನಗಿದೆ. ಆ ಶಕ್ತಿಯನ್ನ ನನಗೆ ದೇವರು ಕೊಟ್ಟಿದ್ದಾನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.
ಹಾಸನ ಜಿಲ್ಲೆಯ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದಲ್ಲಿ ಇಂದು ಶ್ರಾವಣ ಮಾಸದ ಮೂರನೇ ಶನಿವಾರದ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವನು ಕೊಟ್ಟಿರುವ ಜೋಳಿಗೆಯನ್ನು ಗೂಟಕ್ಕೆ ನೇತು ಹಾಕಿ ಸುಮ್ಮನಿದ್ರೆ ಹೇಗೆ ಭಿಕ್ಷೆ ಬೀಳೋದಿಲ್ಲವೋ ಹಾಗೇ ನಾನು ನನ್ನ ಜನರ ಬಳಿಗೆ ಹೋಗುತ್ತೇನೆ ಎಂದರು.
Advertisement
ಎರಡೂ ರಾಷ್ಟ್ರೀಯ ಪಕ್ಷಗಳನ್ನು ಎದುರಿಸಲು ಅನುಗ್ರಹಿಸು ಎಂದು ನನ್ನ ಕುಲದೇವರು ಈಶ್ವರ ಮತ್ತು ರಂಗನಾಥ ಸ್ವಾಮಿಯನ್ನು ಬೇಡಿಕೊಂಡಿದ್ದೇನೆ. ನಮ್ಮ ಪಾಲಿಗೆ ಜನರೇ ಪುಣ್ಯಾತ್ಮರು. ನನ್ನ ಮುಂದಿನ ಹೋರಾಟಕ್ಕೆ ಜನರೇ ಶಕ್ತಿಕೊಡಬೇಕು. ಇದರ ಹೊರತಾಗಿ ನಾನು ದುಡ್ಡಿನಿಂದ ರಾಜಕೀಯ ಮಾಡಲು ಆಗುವುದಿಲ್ಲ. ಬರುವ ಚುನಾವಣೆಯಲ್ಲಿ ಜೆಡಿಎಸ್ ಬಗ್ಗೆ ಅಪಹಾಸ್ಯ ಮಾಡುತ್ತಿದ್ದಾರೆ. ಆದರೆ 224 ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕುತ್ತೇವೆ. ಇದಕ್ಕಾಗಿ ಇಂದಿನಿಂದಲೇ ಸಾಮೂಹಿಕ ನಾಯಕತ್ವದಡಿಯಲ್ಲಿ ಹೋರಾಟ ಶುರು ಮಾಡುತ್ತೇವೆ. ವಿರೋಧಿಗಳ ನಗೆಪಾಟಲು ನೋಡುತ್ತಲೇ ನಾನು ಮುನ್ನುಗ್ಗುತ್ತೇನೆ ಎಂದು ತಿರುಗೇಟು ನೀಡಿದರು.
Advertisement
Advertisement
ಮುಂದಿನ 15 ದಿನಗಳಲ್ಲಿ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಕಾವೇರಿ ನೀರು ಹಂಚಿಕೆ ಸಂಬಂಧ ತೀರ್ಪು ನೀಡಲಿದೆ. ತಮಿಳುನಾಡು ವಾದವನ್ನು ನಾನು ಗಮನಿಸುತ್ತಿದ್ದೇನೆ. 1924ರಲ್ಲಿ ಆಗಿರುವ ನೀರು ಹಂಚಿಕೆ ಒಪ್ಪಂದವನ್ನು ರದ್ದು ಮಾಡಬೇಕು ಎಂದು ನಾನು ಶಾಸಕನಾಗಿದ್ದಾಗಲೇ ವಿಧಾನಸಭೆಯಲ್ಲಿ ಖಾಸಗಿ ನಿರ್ಣಯ ಮಂಡನೆ ಮಾಡಿದ್ದೆ. ಅದೆಲ್ಲವನ್ನೂ ನ್ಯಾಯಪೀಠಕ್ಕೆ ಮನವರಿಕೆ ಮಾಡಲಾಗಿದೆ. ದೇವರ ಅನುಗ್ರಹದಿಂದ ಕಾವೇರಿ ನಮ್ಮ ಪಾಲಿಗೂ ಉಳಿಯಬಹುದು ಎಂದು ಆಶಿಸಿದರು.
Advertisement
ಭಾರತ-ಚೀನಾ ನಡುವೆ ಯುದ್ಧ ನಡೆಯುವ ಸನ್ನಿವೇಶ ನಿರ್ಮಾಣವಾಗಿದೆ. ಇದಕ್ಕೆ ಯಾರು ಹೊಣೆ ಎಂದು ನಾನು ಹೇಳೋದಿಲ್ಲ. ಆದರೆ ಎಲ್ಲಾ ಸನ್ನಿವೇಶವನ್ನು ಕೇಂದ್ರ ಸರ್ಕಾರ ಎದುರಿಸಲು ಸಿದ್ಧವಿದೆ. ನಮ್ಮ ಸೈನಿಕರು ಸಮರ್ಥರಿದ್ದಾರೆ. ಕಾರ್ಗಿಲ್ ಯುದ್ಧ ಸಂದರ್ಭಕ್ಕಿಂತಲೂ ನಾವೀಗ ಪ್ರಬಲರಾಗಿದ್ದೇವೆ. 2 ದೇಶಗಳ ನಡುವೆ ಯುದ್ಧದ ಮಟ್ಟಕ್ಕೆ ಹೋಗುತ್ತೋ? ಇಲ್ಲವೋ? ಗೊತ್ತಿಲ್ಲ. ಆದರೆ ಈ ವಿಷಯದಲ್ಲಿ ರಾಜಕೀಯ ಮಾಡದೇ ನಾವೆಲ್ಲರೂ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.