ಗದಗ: ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ಅವರ ಮುಂದಿನ ರಾಜಕಿಯ ನಡೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿರುವ ಬೆನ್ನಲ್ಲೇ ತಾವು ಗಂಗಾವತಿ (Gangavati) ಮತ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. ತಮ್ಮ ತೀರ್ಮಾನವನ್ನು ಘೋಷಿಸುವುದಕ್ಕೂ ಮುನ್ನವೇ ರೆಡ್ಡಿ ಗಂಗಾವತಿಯಲ್ಲಿ ತಮ್ಮದೇ ರೀತಿಯಲ್ಲಿ ಅಸಲಿ ಆಟ ಪ್ರಾರಂಭಿಸಿದ್ದಾರೆ.
ಜನಾರ್ದನ ರೆಡ್ಡಿಯವರು ಇಂದು ನಗರದ ಐತಿಹಾಸಿಕ ಬಸವೇಶ್ವರ ಪುತ್ಥಳಿ ವೀಕ್ಷಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಗಂಗಾವತಿ ಮತ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ನಿಶ್ಚಯಿಸಿದ್ದೆನೆ ಎಂದು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಕಳೆದ 12 ವರ್ಷದಿಂದ ಬಳ್ಳಾರಿಯಲ್ಲಿದ್ದೇನೆ. ಬಳ್ಳಾರಿಯಿಂದ ಗಂಗಾವತಿಗೆ 1 ಗಂಟೆ ಪ್ರಯಾಣ. ಗಂಗಾವತಿ ಕ್ಷೇತ್ರವನ್ನು ಮುಂದಿನ ಚುನಾವಣೆಗೆ ಆಯ್ಕೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ.
ಅದು ಆಂಜನೇಯನ ಜನ್ಮಸ್ಥಳ, ವಿದ್ಯಾರಣ್ಯರು ತಪಸ್ಸು ಮಾಡಿದ ಪುಣ್ಯಭೂಮಿ. ಮತ್ತೆ ಹೊರಗಡೆ ಇರುವ ಪರಿಸ್ಥಿತಿ ಬಂದಾಗ ಪದೆ ಪದೆ ಬೆಂಗಳೂರಿಗೆ ಹೋಗೊಕಾಗಲ್ಲ. ಬಳ್ಳಾರಿಯಿಂದ ಹಿಡಿದು ಗದಗ, ಬೆಳಗಾವಿ, ಬೀದರ್, ಉತ್ತರ ಕರ್ನಾಟಕದ ಗಾಳಿ, ವಾತಾವರಣ ನನಗೆ ಹಿಡಿಸಿದೆ. ಹೀಗಾಗಿ ನಾನು ಗಂಗಾವತಿ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಜನಾರ್ದನ ರೆಡ್ಡಿ ಅವರು ಬೇರೆ ಪಕ್ಷ ಕಟ್ಟುತ್ತಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯೇ ನನ್ನ ಇಡೀ ರಾಜಕೀಯದ ಜೀವನ. ಕಳೆದ 30 ವರ್ಷಗಳಿಂದ ಬಿಜೆಪಿಯೇ ನಮ್ಮ ಕುಟುಂಬ. ಲಾಲ್ ಕೃಷ್ಣಾ ಆಡ್ವಾಣಿಯವರ ರಾಮಮಂದಿರ ವಿಚಾರದಲ್ಲಿ ಎಮೋಷನಲ್‌ನಿಂದ ಬಂದವರು ನಾವು. ನನ್ನ ವಿಚಾರದಲ್ಲಿ ಪಕ್ಷದ ಹಿರಿಯರು ಏನು ತೀರ್ಮಾನ ಮಾಡುತ್ತಾರೆ ಅಂತ ನೋಡುತ್ತಿದ್ದೇನೆ. ಸದ್ಯಕ್ಕೆ ಬೇರೆ ವಿಚಾರವನ್ನೆನೂ ಹೇಳಲು ಇದು ಸರಿಯಾದ ಸಮಯ ಅಲ್ಲ ಎಂದರು. ಇದನ್ನೂ ಓದಿ: ಶಿರಸಿ ಪ್ರತ್ಯೇಕ ಜಿಲ್ಲೆ ಕೂಗಿಗೆ ಕಾಗೇರಿ ಬೆಂಬಲ
12 ವರ್ಷಗಳ ಕಾಲ ನಾನು ಮನೆಯಲ್ಲಿ ಕೂತಿದ್ದೇನೆ. ಈಗ ಮನೆಯಲ್ಲಿ ಕುಳಿತುಕೊಳ್ಳುವ ವಯಸ್ಸೂ ಕೂಡಾ ನನ್ನದಲ್ಲ. ಸಾರ್ವಜನಿಕ ಬದುಕಲ್ಲಿ ಬರಬೇಕೆನ್ನುವುದು ನನ್ನ ಸ್ಪಷ್ಟ ತೀರ್ಮಾನ. ನನ್ನನ್ನು ಯಾವ ದಾರಿಯಲ್ಲಿ ತೆಗೆದುಕೊಂಡು ಹೋಗುತ್ತೊ ಅನ್ನೋದು ಬಸವೇಶ್ವರನಿಗೆ ಬಿಟ್ಟಿದ್ದು ಎಂದು ನುಡಿದರು.
ಇದೇ ವೇಳೆ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ನಡುವೆ ಬಿರುಕು ಅನ್ನೋದು ಮಾಧ್ಯಮಗಳ ಸೃಷ್ಟಿ. ಈ ಜನ್ಮದಲ್ಲಿ ಅದು ಕನಸಾಗಿಯೇ ಉಳಿಯುತ್ತೆ. ಯಾವತ್ತೂ ಬಿರುಕು ಅನ್ನೋ ಪ್ರಶ್ನೆಯೇ ಬರೋದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಘಾಟಿ ಸುಬ್ರಹ್ಮಣ್ಯ ದೇವಾಲಯದ ರಸ್ತೆಯಲ್ಲಿ ಚಿರತೆ ದರ್ಶನ – ಭಕ್ತರಲ್ಲಿ ಆತಂಕ