– ನಾನು ಹೋಗಿ ಪರಿಸ್ಥಿತಿ ಕಂಟ್ರೋಲ್ ಮಾಡೋಕೆ ಆಗಲ್ಲ
– ಇದರಲ್ಲಿ ಮಂಡ್ಯ ಶಾಸಕರು ರಾಜಕಾರಣ ಮಾಡಿದ್ದಾರೆ
ನವದೆಹಲಿ: ಮಂಡ್ಯದ ಕೆರಗೋಡಿನಲ್ಲಿ (Keragodu Mandya) ನಡೆದ ಹನುಮ ಧ್ವಜ ಗಲಾಟೆ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು ಕೊನೆಗೂ ಮೌನ ಮುರಿದಿದ್ದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ದೆಹಲಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕೆರಗೋಡಲ್ಲಿ ನಡೆದ ಘಟನೆ ನೋಡಿ ಬೇಸರ ಆಗಿದೆ. ನಾನು ಈಗ ಆ ಸ್ಥಳಕ್ಕೆ ಹೋದ್ರೆ ಅದು ರಾಜಕೀಯ ಆಗುತ್ತೆ. ಹೀಗಾಗಿ ನಾನು ಅಲ್ಲಿ ಹೋಗಿ ಪರಿಸ್ಥಿತಿ ಕಂಟ್ರೋಲ್ ಮಾಡೋಕೆ ಆಗಲ್ಲ. ನಾನು ಬೇಕು ಅಂತಲೇ ಆ ಸ್ಥಳಕ್ಕೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಕೆರಗೋಡು ಜನರೇ ಯಾವ ರೀತಿ ಹೋರಾಟ ಮಾಡ್ತಿದ್ದಾರೆ ಅನ್ನೋದು ನೋವಿನ ವಿಚಾರ. ಇಷ್ಟರ ಮಟ್ಟಿಗೆ ಆಗುವಂತಹ ಅಗತ್ಯವೇ ಇರಲಿಲ್ಲ. ಒಬ್ಬರು ಮಾಡಿದ್ದ ತಪ್ಪಿಗೆ ಇಡೀ ಸರ್ಕಾರ ಬಂದು ಸಮರ್ಥನೆ ಮಾಡುವ ಪರಿಸ್ಥಿತಿಗೆ ಬಂದಿದೆ ಎಂದರು.
ಗ್ರಾಮಸ್ಥರಿಗೆ ಎಲ್ಲರೂ ಸಹಕಾರ ಕೊಟ್ಟಿದ್ದಕ್ಕೆ ಆ ಧ್ವಜವನ್ನ ಹಾರಿಸೋಕೆ ಸಾಧ್ಯ ಆಗಿದೆ. ಆ ಧ್ವಜ ಹಾರಿಸಿ 6 ದಿನಗಳ ಕಾಲ ಯಾರಿಗೂ ಏನು ಸಮಸ್ಯೆ ಇರಲಿಲ್ಲ. ಯಾವ ಅಧಿಕಾರಿ ಬಂದಿಲ್ಲ, ಯಾರಿಗೂ ನೋವಾಗಿಲ್ಲ ಅಥವಾ ಗಲಭೆನೂ ಆಗಿಲ್ಲ. ಹೀಗಿರುವಾಗ ರಾತ್ರಿ 3 ಗಂಟೆ ಹೊತ್ತಲ್ಲಿ ಏಕಾಏಕಿ ಬಂದು ಈ ರೀತಿ ಮಾಡಿದ್ದಾರೆ. ಯಾರ ಸೂಚನೆ ಮೇರೆಗೆ ಬಂದು ಈ ರೀತಿ ಮಾಡಿದ್ದಾರೋ ಅಂತ ಗೊತ್ತಾಗಬೇಕಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹನುಮಧ್ವಜ ತೆರವು ಖಂಡಿಸಿ ಪ್ರತಿಭಟಿಸಿದ್ದ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್
ಜನರನ್ನ ವಿಶ್ವಾಸಕ್ಕೆ ಪಡೆದು ಮಾಡಿದ್ರೆ ಕೆರಗೋಡಲ್ಲಿ ಈ ರೀತಿ ಬೆಂಕಿ ಉರಿತಾ ಇರಲಿಲ್ಲ. ಅಲ್ಲಿ ನಡೆದಿರೋ ಪ್ರತಿಭಟನೆಯಲ್ಲಿ ಒಬ್ಬರ ಕಣ್ಣು ಹೋಯ್ತು, ಅದನ್ನ ಯಾರು ವಾಪಸ್ ತಂದು ಕೊಡೋಕೆ ಆಗುತ್ತೆ..?. ಈ ಪರಿಸ್ಥಿತಿಯಲ್ಲಿ ಅಲ್ಲಿ ಪೊಲೀಸರು ಬರಬೇಕು. ಬೇರೆಯವರು ಎಲ್ಲಾ ಬರ್ತಿದ್ದಾರೆ ಪ್ರತಿಭಟನೆ ಸಹ ಮಾಡುತ್ತಿದ್ದಾರೆ. ಆದರೆ ನಾನು ಎಂಪಿ ಆಗಿ ಬೇರೆ ಸ್ಟ್ಯಾಂಡ್ ತೆಗೆದುಕೊಳ್ಳಬೇಕಾಗುತ್ತದೆ. ನಾನು ಪ್ರತಿಭಟನೆಯಲ್ಲಿ ಭಾಗವಹಿಸೋಕೇ ಆಗಲ್ಲ, ಆದ್ರೆ ಜನರ ಭಾವನೆ ಜೊತೆ ನಾನು ಇರುತ್ತೇನೆ ಎಂದರು.
ಮಂಡ್ಯ ಶಾಸಕರ ವಿರುದ್ಧ ಕಿಡಿ: ಸರ್ಕಾರ ಈ ರೀತಿ ಮಾಡಿದೆ ಅಂತ ನಾನು ಹೇಳೋಕೆ ಇಷ್ಟ ಪಡಲ್ಲ. ಮಂಡ್ಯ ಶಾಸಕರು ಇದರಲ್ಲಿ ಶಾಮೀಲು ಆಗಿದ್ದಾರೆ ಅನ್ನೋದು ನಿಜ. ಅಲ್ಲಿನ ಗ್ರಾಮಸ್ಥರು ಸಹ ಇದೇ ಮಾತನ್ನು ಹೇಳುತ್ತಿದ್ದಾರೆ. ಆ ಕಾರ್ಯಕ್ರಮಕ್ಕೆ ಮಂಡ್ಯ ಶಾಸಕರು ಕರೆದಿಲ್ಲ ಅಂತ ಈ ರೀತಿ ಮಾಡಿದ್ದಾರೆ. ಒಟ್ಟಿನಲ್ಲಿ ಮಂಡ್ಯ ಶಾಸಕರು ಇದರಲ್ಲಿ ರಾಜಕಾರಣ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಒಬ್ಬರ ಅಹಂ, ಪ್ರತಿಷ್ಠೆಯಿಂದಾಗಿ ಇಷ್ಟೆಲ್ಲ ಆಗಿದೆ. ಸರ್ಕಾರಕ್ಕೂ ಗೊತ್ತಿರಬೇಕು ಯಾರದ್ದು ತಪ್ಪು ಅಂತ. ಇಡೀ ಸರ್ಕಾರವನ್ನ ನಾನು ಬ್ಲೇಮ್ ಮಾಡಲ್ಲ. ಆದ್ರೆ ಸ್ಥಳೀಯ MLA ಇಲ್ಲಿ ಎಡವಿದ್ದಾರೆ ಅನ್ನೋದು ಸ್ಪಷ್ಟ. ಈಗ ಅವರು ಅದನ್ನ ಕವರ್ ಮಾಡೋಕೆ ಪ್ರತ್ಯಾರೋಪ ಮಾಡುತ್ತಿದ್ದಾರೆ. ಈಗ ಶಾಂತಿ ನೆಲೆಸುವತ್ತ ಕೆಲಸ ಮಾಡಬೇಕು ಎಂದು ಸುಮಲತಾ ಹೇಳಿದರು.