ಚಾಮರಾಜನಗರ: ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಸಿಬಿಐ ಏಕೆ ಯಾವುದೇ ಸಂಸ್ಥೆ ಮೂಲಕ ತನಿಖೆ ನಡೆಸಲಿ ನನ್ನ ಅಭ್ಯಂತರವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಸಂಬಂಧ ಜಿಲ್ಲೆಯ ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ತನಿಖೆಯನ್ನು ಸಿಬಿಐ ಏಕೆ ಯಾವ ಸಂಸ್ಥೆಗೆ ಬೇಕಾದರೂ ವಹಿಸಲಿ, ನನಗೆ ಅಭ್ಯಂತರವಿಲ್ಲ ಎಂದು ತಿಳಿಸಿದರು.
ನೀವು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ ಎಂಬ ಉದ್ದೇಶದಿಂದ ಸಿಬಿಐ ತನಿಖೆಗೆ ವಹಿಸಲು ಸರ್ಕಾರ ನಿರ್ಧರಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅದರಲ್ಲಿ ಯಡಿಯೂರಪ್ಪನವರು ಇದ್ದಾರೆ ಎಂದು ಹೇಳುವ ಮೂಲಕ ಬಿಎಸ್‍ವೈಗೆ ಟಾಂಗ್ ನೀಡಿದರು.
ಬಿಎಸ್‍ವೈ ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ, ಪ್ರವಾಹ ಪರಿಹಾರಕ್ಕೆ ಕೇಂದ್ರಕ್ಕೆ ಸರ್ವಪಕ್ಷ ಕರೆದೊಯ್ಯವಲ್ಲಿ ವಿಫಲರಾಗಿದ್ದಾರೆ. ಸರ್ವಪಕ್ಷ ಕರೆದೊಯ್ಯಲು ನಾವು ಒತ್ತಾಯ ಮಾಡುವುದಲ್ಲ. ಅದು ಮುಖ್ಯಮಂತ್ರಿ ಜವಾಬ್ದಾರಿ. ನಿಯೋಗ ಕೊಂಡೊಯ್ಯಲು ಆಗದಿದ್ದರೆ ರಾಜೀನಾಮೆ ನೀಡಲಿ. ನಾನು ಸಿಎಂ ಆಗಿದ್ದರೆ ಸರ್ವಪಕ್ಷ ನಿಯೋಗ ಕರೆದೊಯ್ದು ಒತ್ತಾಯ ಮಾಡಿ ಇಷ್ಟೊತ್ತಿಗೆ ಗಬ್ಬೆಬ್ಬಿಸುತ್ತಿದ್ದೆ. ಕೇಂದ್ರ ಸರ್ಕಾರದ ಆದ್ಯತೆ ಏನೆಂಬುದೇ ಅರ್ಥ ಆಗುತ್ತಿಲ್ಲ. ಮೋದಿ ಉದ್ದುದ್ದ ಭಾಷಣ ಬಿಗಿಯುತ್ತಾ ವಿದೇಶ ಸುತ್ತುತ್ತಿದ್ದಾರೆ. ನೆರೆ ಸಂತ್ರಸ್ತರ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಕೇಂದ್ರ ಸರ್ಕಾರ ಹಣಕಾಸು ಮುಗ್ಗಟ್ಟು ಎದುರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.