ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಅರ್ಜಿ ಹಾಕ್ಕೊಂಡು ಕುಳಿತಿಲ್ಲ. ಕೆಲವರು ಮುಂದೆ ಚೆನ್ನಾಗಿ ಮಾತಾಡಿ, ಹಿಂದೆ ಪಿತೂರಿ ಮಾಡ್ತಾರೆ ಅಂತಾ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಹುದ್ದೆಗೆ ನಾನು ಸ್ಪರ್ಧಿಯಲ್ಲ. ಪಕ್ಷದ ಎಲ್ಲರೂ ಸಾಮೂಹಿಕವಾಗಿ ಒಪ್ಪಿದ್ರೆ ಆಗ ಯೋಚನೆ ಮಾಡೋಣ. ಕೆಲವರು ನಾನು ಅಷ್ಟು ಬಾರಿ ಗೆದ್ದಿದ್ದೇನೆ, ಇಷ್ಟು ಸೀನಿಯರ್ ಅಂತ ಮಾತಾಡ್ತಿದ್ದಾರೆ ಅಂತಾ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಆಕಾಂಕ್ಷಿ ಸಂಸದ ಮುನಿಯಪ್ಪ ಅವರಿಗೆ ಟಾಂಗ್ ಕೊಟ್ರು.
Advertisement
ಕೆಲವರು ನಾನು ಅಧ್ಯಕ್ಷ ಆಗ್ಬೇಕು ಅಂತಾ ಬಯಸ್ತಾರೆ. ಇನ್ನೂ ಕೆಲವರು ಆಗೋದೇ ಬೇಡಾ ಅಂತಾರೆ ಅಂದ್ರು. ಸಿಎಂ ಸಿದ್ದರಾಮಯ್ಯ ನಿಮ್ಮ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರಾ ಅನ್ನೋ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ವ್ಯಂಗ್ಯವಾಗಿ ಉತ್ತರಿಸಿದ ಡಿಕೆಶಿ, ಈ ಬಗ್ಗೆ ಸಿಎಂ ಅವರನ್ನೇ ಕೇಳಿ. ಡಿಕೆ ಶಿವಕುಮಾರ್ ಅಧ್ಯಕ್ಷ ಆಗೋದು ಬೇಡ ಅಂತ ಸಿಎಂ ಎಲ್ಲಿಯೂ ಹೇಳಿಲ್ಲ ಅಂದ್ರು.
Advertisement
ನಾನು ಯಾವುದೇ ಕಾರಣಕ್ಕೂ ಹೈಕಮಾಂಡ್ ಬಳಿ ಹೋಗಲ್ಲ. ನನಗೆ ಅದರ ಅವಶ್ಯಕತೆ ಇಲ್ಲ. ಹೈಕಮಾಂಡ್ ಮತ್ತು ಸಿಎಂ ಸಿದ್ದರಾಮಯ್ಯ ಕೊಟ್ಟ ಎಲ್ಲ ಜವಾಬ್ದಾರಿಗಳನ್ನ ಸಮರ್ಥವಾಗಿ ನಿಭಾಯಿಸಿದ್ದೇನೆ ಅಂದ್ರು. ಎಂಬಿ ಪಾಟೀಲ್ ಹಾಗೂ ಹೆಚ್‍ಸಿ ಮಹದೇವಪ್ಪ ಅವರ ಹೆಸರು ಕೇಳಿ ಬರ್ತಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರೇ ಆಗಲಿ ಅಥವಾ ಬೇರೆ ಯಾರಾದ್ರೂ ಅಧ್ಯಕ್ಷರಾಗಲಿ ನನಗೆ ಬೇಸರವಿಲ್ಲ ಅಂದ್ರು.
Advertisement
ಪಕ್ಷದ ನಿರ್ಧಾರಕ್ಕೆ ತಲೆಬಾಗ್ತೀವಿ: ಈ ನಡುವೆ 1 ವರ್ಷದ ಹಿಂದೆ ನಾನು ನಮ್ಮ ಅಧ್ಯಕ್ಷರು ಸೋನಿಯಾಗಾಂಧಿ ಭೇಟಿಯಾಗಿದ್ವಿ. ಆಗ ಕೆಪಿಸಿಸಿ ಅಧ್ಯಕ್ಷರಾಗಿ ಅಂತಾ ಮೇಡಂ ಸೋನಿಯಾ ಗಾಂಧಿ ಹೇಳಿದ್ರು ಅಂತಾ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಆಗ ಬೇಡ ಅಂದಿದ್ದೆ. ಈಗ ಪಕ್ಷ ಏನೇ ನಿರ್ಧಾರ ಕೈಗೊಂಡ್ರೂ ಅದಕ್ಕೆ ನಾವೆಲ್ಲರೂ ತಲೆಬಾಗುತ್ತೇವೆ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಅಂತಾ ಅವರು ಹೇಳಿದ್ರು.
Advertisement
ಅನೇಕರು ಸಮರ್ಥರಿದ್ದಾರೆ: ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರ ಹೈಕಮಾಂಡ್‍ಗೆ ಬಿಟ್ಟಿದ್ದು. ವೈಯಕ್ತಿಕ ಪ್ರತಿಷ್ಠೆಗಿಂತ ಪಕ್ಷದ ಪ್ರತಿಷ್ಠೆ ಮುಖ್ಯ ಅಂತಾ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ. ವಿಕಾಸಸೌಧದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರಾಗಲು ಅನೇಕರು ಸಮರ್ಥರಿದ್ದಾರೆ. ಡಿಕೆ ಶಿವಕುಮಾರ್ ಅವರೂ ಸಮರ್ಥರಿದ್ದಾರೆ. ನಮ್ಮಲ್ಲಿ ಅನೇಕರು ದೇಶ ಕಟ್ಟುವ ನಾಯಕರಿದ್ದಾರೆ. ನಾನಂತೂ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸ್ತೇನೆ ಅಂತಾ ಪರೋಕ್ಷವಾಗಿ ಅಧ್ಯಕ್ಷಗಾದಿಯಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸಾಮೂಹಿಕ ನಾಯಕತ್ವ ಇನ್ನಷ್ಟು ಬಲಗೊಳ್ಳಬೇಕು. ಎರಡು ಸ್ಥಾನ ಗೆದ್ದಿದ್ದಕ್ಕೆ ಬೀಗುವ ಅಗತ್ಯವಿಲ್ಲ. ಅದು ಜನ ನಮಗೆ ಕೊಟ್ಟ ಬೆಂಬಲವಾಗಿದೆ. ಈಗಿನಿಂದಲೇ ಚುನಾವಣೆಗೆ ಸಿದ್ಧರಾಗಬೇಕಿದೆ ಅಂದ್ರು. ನಾನು, ಸಿಎಂ, ಕಾರ್ಯಾಧ್ಯಕ್ಷರು ದೆಹಲಿಗೆ ಹೋಗಿ ಬಂದಿದ್ದೇವೆ. ಉಪಚುನಾವಣೆಗಳಲ್ಲಿ ಪಡೆದ ಗೆಲುವಿನ ಬಗ್ಗೆ ತಿಳಿಸಲು ಹೋಗಿದ್ದೆವು. ರಾಜ್ಯದಲ್ಲಿ ಪಕ್ಷ ಸದೃಢವಾಗಿದೆ ಎಂದು ಸಂದೇಶ ನೀಡಲು ಹೋಗಿದ್ದೆವು. ಇನ್ನಷ್ಟು ಪಕ್ಷ ಸಂಘಟನೆಗೆ ವರಿಷ್ಠರು ನಮಗೆ ಸೂಚನೆ ಕೊಟ್ಟು ಕಳಿಸಿದ್ದಾರೆ. ನಮಗೆ ಇನ್ನಷ್ಟು ಜವಾಬ್ದಾರಿಯಿಂದ ಕೆಲಸ ಮಾಡುವಂತೆ ವರಿಷ್ಠರು ಸೂಚಿಸಿದ್ದಾರೆ ಅಂದ್ರು.
ಜೂನ್ 27ಕ್ಕೆ ಕೆಂಪೇಗೌಡ ಜಯಂತಿ: ಕರ್ನಾಟಕ ಸರ್ಕಾರದ ಪರವಾಗಿ ಜೂನ್ 27ಕ್ಕೆ ಕೆಂಪೇಗೌಡ ಜಯಂತಿ ಆಚರಣೆ ಮಾಡ್ತೀವಿ ಅಂತಾ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೆಂಪೇಗೌಡ ಜಯಂತಿ ಆಚರಣೆ ವಿಚಾರವಾಗಿ ದಿನಾಂಕದ ಬಗ್ಗೆ ಗೊಂದಲ ಇತ್ತು. ಮಠದಲ್ಲಿ ಸ್ವಾಮೀಜಿಗಳು ಸಭೆ ಮಾಡಿ ಜೂನ್ 27ಕ್ಕೆ ಇತಿಹಾಸದ ಪ್ರಕಾರ ಜಯಂತಿ ಅಂತ ಹೇಳಿದ್ದಾರೆ. ಹೀಗಾಗಿ ಅದನ್ನ ಅಧಿಕೃತವಾಗಿ ಗೆಜೆಟ್ ಮಾಡುತ್ತಿದ್ದೇವೆ. ಜಯಂತಿಗೂ ಮುನ್ನ ಪ್ರಾಧಿಕಾರದ ಸಭೆ ಮಾಡಿ ಸಿದ್ಧತೆ ಮಾಡಿಕೊಳ್ತೀವಿ ಅಂತಾ ಹೇಳಿದ್ದಾರೆ.