ಬೆಂಗಳೂರು: ಮುಖ್ಯಮಂತ್ರಿಗಳ ಜೊತೆ ಮಾತನಾಡಿ ನಾನೇ ಗೃಹಲಕ್ಷ್ಮಿಯನ್ನ (Gruhalakshmi Scheme) ಸ್ವಲ್ಪ ಹೋಲ್ಡ್ ಮಾಡಿಸಿದ್ದೇನೆ. ಗಲಾಟೆ ಕಡಿಮೆ ಮಾಡಲು ಹೀಗೆ ಮಾಡಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆ ವಿಳಂಬ ವಿಚಾರಕ್ಕೆ ನಗರದಲ್ಲಿಂದು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳೊಂದಿಗೆ (Chief Minister) ಮಾತನಾಡಿ ಗೃಹಲಕ್ಷ್ಮಿಯನ್ನ ನಾನೇ ಸ್ವಲ್ಪ ಹೋಲ್ಡ್ ಮಾಡಿಸಿದ್ದೇನೆ. ಗಲಾಟೆ ಕಡಿಮೆ ಮಾಡಲು ಹೀಗೆ ಮಾಡಿದ್ದೇನೆ. ಮಹಿಳಾ ಸಚಿವರೊಂದಿಗೆ ಒಂದು ಸಭೆ ಮಾಡಿ, ಸರಳವಾಗಿ ಯೋಜನೆ ಅನುಷ್ಠಾನ ಮಾಡ್ತೀವಿ. ಭ್ರಷ್ಟಾಚಾರ ರಹಿತ ಯೋಜನೆ ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ.
ಅರ್ಜಿಯನ್ನ ಪ್ರತಿಯೊಬ್ಬರೂ ಉಚಿತವಾಗಿ ಸಲ್ಲಿಸುವಂತೆ ಮಾಡಿಕೊಡಬೇಕು. ಯಾರಾದ್ರೂ ಸಂಘ ಸಂಸ್ಥೆಗಳು ಹಣ ವಸೂಲಿ ಮಾಡಿದ್ರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅವರ ಏಜೆನ್ಸಿಯನ್ನೇ ರದ್ದು ಮಾಡ್ತೀವಿ. ಈ ಸ್ಕೀಮ್‌ಗಳಲ್ಲಿ ಯಾರೊಬ್ಬರಿಗೂ ಲಂಚ ಕೊಡಬಾರದು. ಒಂದು ವೇಳೆ ಲಂಚ ಕೇಳಿದ್ರೆ ನಾವು ಒಂದು ಸಹಾಯವಾಣಿ ಸಂಖ್ಯೆ ಕೊಡ್ತೀವಿ, ಅದಕ್ಕೆ ಕಾಲ್ ಮಾಡಿ ದೂರು ಕೊಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಸಾವಿನಲ್ಲೂ ಶತಕ ಬಾರಿಸಿದ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ಹೈವೇ : ಅಪಘಾತಕ್ಕೆ ಕಾರಣ ಏನು?
ನಮ್ಮ ಮೇಲೆ ಕೇಸ್ ಹಾಕಿರೋದನ್ನ ನೆನಪಿಸಿಕೊಳ್ಳಲಿ:
ಗ್ಯಾರಂಟಿಗಳ ಗೊಂದಲಗಳ ಬಗ್ಗೆ ಬಿಜೆಪಿ (BJP) ಸದನದಲ್ಲಿ ಹೋರಾಟ ಮಾಡುವ ಬಗ್ಗೆ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ (BS Yediyurappa) ಅವರಿಗೆ ಪ್ರಜಾಪ್ರಭುತ್ವದಲ್ಲಿ ಹೋರಾಟಕ್ಕೆ ಅವಕಾಶ ಇದೆ. ಆದ್ರೆ ನಾವು ಪ್ರತಿಭಟನೆ ಮಾಡಿದಾಗ ನಮ್ಮ ಮೇಲೆ ಕೇಸ್ ಹಾಕಿರೋದನ್ನ ನೆನೆಸಿಕೊಳ್ಳಲಿ. ಅವರು ಪಕ್ಷದ ಅಧ್ಯಕ್ಷರಾಗಿದ್ದಾಗ ಅವರ ಪ್ರಣಾಳಿಕೆ ತೆಗೆದು ನೋಡಲಿ, ನಮ್ಮ ಸರ್ಕಾರ ಬಂದು ಇನ್ನೂ ಒಂದು ತಿಂಗಳು ಆಗಿದೆ. ರೈತರ ಆದಾಯ ಡಬಲ್ ಮಾಡ್ತೀವಿ, 2 ಕೋಟಿ ಉದ್ಯೋಗ ಕೊಡ್ತೀವಿ, ಬ್ಲಾಕ್ ಮನಿ ತಂದು 15 ಲಕ್ಷ ಅಕೌಂಟ್‌ಗೆ ಹಾಕ್ತೀವಿ ಅಂದಿದ್ದರು. ಕೇಂದ್ರದ ಘೋಷಣೆಗಳನ್ನ ಅನುಷ್ಠಾನ ಮಾಡಿದ್ರಾ ಅಂತಾ ಪ್ರಶ್ನಿಸಿದ್ದಾರೆ.
ಯಡಿಯೂರಪ್ಪನವರೇ ನೀವು ಬಸವಣ್ಣನ ನಾಡಿನವರು, ನಿಮ್ಮ ಧರಣಿಗೆ ನಾನೂ ಬರುತ್ತೇನೆ, ನಿಮಗೆ ಹಾರೈಸುತ್ತೇವೆ. ನೀವು ನಮಗೆ ಮಾರ್ಗದರ್ಶನ ಮಾಡಿ. ಪಾರ್ಲಿಮೆಂಟ್ ಚುನಾವಣೆ ಬರುತ್ತಿರುವುದರಿಂದ ಇನ್ನೂ ನಮಗೆ ಶಕ್ತಿ ಇದೆ ಅಂತಾ ತೋರಿಸಿಕೊಳ್ಳಲು ಮಾತನಾಡ್ತಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನವರ ಮನೆಯಲ್ಲಿ ಮಗು ಹುಟ್ಟಿದ್ರೂ ಬಿಜೆಪಿಯವರೇ ಕಾರಣ ಅಂತಾರೆ- ಈಶ್ವರಪ್ಪ ಲೇವಡಿ
ಕುಮಾರಣ್ಣ ಸಲಹೆ ಕೊಡಲಿ:
ಗೃಹಜ್ಯೋತಿ ಅಲ್ಲ ಸುಡುವ ಜ್ಯೋತಿ ಎಂಬ ಹೆಚ್‌ಡಿಕೆ (HD Kumaraswamy) ಹೇಳಿಕೆಗೆ ತಿರುಗೇಟು ನೀಡಿದ ಡಿಸಿಎಂ, ನಾವು ಎಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದೀವಿ..? ರಿಸಲ್ಟ್ ಬರೋಕೆ ಮುಂಚೆಯೇ ಅವ್ರು ಜಾಸ್ತಿ ಮಾಡಿದ್ದಾರೆ. ಕುಮಾರಸ್ವಾಮಿ ಅವರಿಗೆ ಗೊತ್ತಿಲ್ಲದೇ ಇರಬಹುದು. ಆದರೆ ನಾನೊಬ್ಬ ಪವರ್ ಮಿನಿಸ್ಟರ್ ಆಗಿದ್ದವನು, ನನಗೆ ಎಲ್ಲವೂ ಗೊತ್ತಿದೆ. ಕುಮಾರಣ್ಣ ಪಾಪ, ಅವರು ಅವರದ್ದೇ ಲೋಕದಲ್ಲಿ ಇದ್ದಾರೆ. ಕುಮಾರಣ್ಣ ಬೇಕಿದ್ರೆ ಸಲಹೆ ಕೊಡಲಿ ಎಂದು ವ್ಯಂಗ್ಯವಾಡಿದ್ದಾರೆ.
ನಮ್ಮ ಅಕ್ಕ ತಂಗಿಯರು ಬಸ್‌ನಲ್ಲಿ ಓಡಾಡ್ತಿದ್ದಾರೆ:
ರಾಜ್ಯದ ಜನರು ನಮ್ಮ ಸರ್ಕಾರದ ಪರವಾಗಿ ಮಾತಾಡ್ತಿದ್ದಾರೆ. ನಮ್ಮ ಅಕ್ಕ-ತಂಗಿಯರು ಬಸ್ಸಿನಲ್ಲಿ ದೇವಸ್ಥಾನ ಎಲ್ಲ ಕಡೆ ಹೋಗಿಬರುತ್ತಿದ್ದಾರೆ. ನೋಡಿ ನಮ್ಮ ಸರ್ಕಾರ ಇರುವಾಗ ಎಲ್ಲ ಮಹಿಳೆಯರು ಎಲ್ಲ ದೇವಸ್ಥಾನಗಳಿಗೆ ಹೋಗ್ತಿದ್ದಾರೆ. ಪಾಪ ಬಸ್ಸಿನ ಡೋರ್ ಬಾಗಿಲು ಎಲ್ಲ ಕಿತ್ತು ಹಾಕ್ತಿದ್ದಾರೆ. ಆದ್ರೆ ಧರ್ಮಸ್ಥಳ, ಕುಕ್ಕೆ ಎಲ್ಲ ಕಡೆಯೂ ಓಡಾಡ್ತಿದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.