ನವದೆಹಲಿ: ಮುಂದಿನ 8 ತಿಂಗಳಲ್ಲಿ ವಿಧಾನಸಭಾ ಚುನಾವಣೆ ಇದೆ. ಈ ಹಿನ್ನೆಲೆ ಪಕ್ಷದ ಸಂಘಟನೆ ಹಾಗೂ ಮುಂದಿನ ಚುನಾವಣೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.
ಶುಕ್ರವಾರ ದೆಹಲಿಯಲ್ಲಿ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಬಿಎಸ್‌ವೈ, ವಿಧಾನಸಭಾ ಚುನಾವಣೆಗೆ ಇನ್ನು 8 ತಿಂಗಳು ಇದೆ. ಹೀಗಾಗಿ ನಡ್ಡಾ ಅವರನ್ನು ನಮ್ಮ ರಾಜ್ಯದಲ್ಲಿ ಹೆಚ್ಚು ಪ್ರವಾಸ ಮಾಡುವಂತೆ ಮನವಿ ಮಾಡಿದ್ದೇನೆ. ಆದರೆ ರಾಜ್ಯಾಧ್ಯಕ್ಷರ ಬಗ್ಗೆ ಚರ್ಚೆ ಮಾಡಿಲ್ಲ. ಆ ತಿರ್ಮಾನವನ್ನು ಪಕ್ಷವೇ ಮಾಡಲಿದೆ ಎಂದು ಹೇಳಿದರು.
ನಡ್ಡಾ ಅವರು ರಾಜ್ಯಕ್ಕೆ ಹೆಚ್ಚು ಸಮಯ ನೀಡುವ ಭರವಸೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ನಡ್ಡಾ ಇಬ್ಬರೂ ರಾಜ್ಯಕ್ಕೆ ಬರಲಿದ್ದಾರೆ. ಇದೀಗ ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಿದೆ. ಇದಕ್ಕಾಗಿ ಮಾಡಿಕೊಂಡಿರುವ ತಯಾರಿ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕೇವಲ 5 ನಿಮಿಷ- ಭಾರೀ ಅನಾಹುತದಿಂದ ಪಾರಾದ್ರು ಡಾ. ಜಿ ಪರಮೇಶ್ವರ್!
ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @JPNadda ರವರನ್ನು ಇಂದು ನವದೆಹಲಿಯಲ್ಲಿ ಭೇಟಿ ಮಾಡಲಾಯಿತು. ಪಕ್ಷದ ಉನ್ನತ ಸಮಿತಿಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶಕ್ಕಾಗಿ ಧನ್ಯವಾದ ಸಲ್ಲಿಸಿ, ರಾಜ್ಯದಲ್ಲಿ ಪಕ್ಷ ಸಂಘಟನೆ ಸೇರಿದಂತೆ ಪ್ರಮುಖ ವಿದ್ಯಮಾನಗಳ ಕುರಿತು ಮಾನ್ಯ ನಡ್ಡಾಜಿ ಅವರೊಂದಿಗೆ ವಿವರವಾಗಿ ಚರ್ಚಿಸಲಾಯಿತು. pic.twitter.com/lkgCSgIw44
— B.S.Yediyurappa (@BSYBJP) August 26, 2022
ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆ ವಿಚಾರವಾಗಿ ಮಾತನಾಡಿದ ಯಡಿಯೂರಪ್ಪ, ಹೈಕೋರ್ಟ್ ಆದೇಶ ಸ್ವಾಗತಾರ್ಹವಾಗಿದೆ. ಎಲ್ಲರನ್ನೂ ಒಗ್ಗೂಡಿಸಲು ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಅನಗತ್ಯ ಗೊಂದಲ ಮಾಡುವವರು ಮಾಡಿಕೊಳ್ಳುತ್ತಿರುತ್ತಾರೆ. ಜಾಗದ ವಿಚಾರವಾಗಿ ಬಡಿದಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಶಾಂತ ರೀತಿಯಲ್ಲಿ ಗಣೇಶ ಉತ್ಸವ ನಡೆಯಲಿದ್ದು, ಎಲ್ಲರೂ ಅದಕ್ಕಾಗಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಯಡಿಯೂರಪ್ಪ ಅವರು ಜೆ.ಪಿ ನಡ್ಡಾ ಭೇಟಿ ಬಳಿಕ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಭೇಟಿಯಾಗಿದ್ದಾರೆ. ಸಂತೋಷ್ ಅವರ ನಿವಾಸದಲ್ಲಿ ಭೇಟಿಯಾದ ಬಿಎಸ್‌ವೈ ಕುಶಲೋಪರಿ ಚರ್ಚೆ ನಡೆಸಿದ್ದಾರೆ. ಬಿಎಸ್‌ವೈ ಇಂದು ತಡ ರಾತ್ರಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದ್ದು, ನಾಳೆ ಬೆಳಗ್ಗೆ ಬೆಂಗಳೂರಿಗೆ ಮರಳಲಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 1,191 ಮಂದಿಗೆ ಕೊರೊನಾ ಸೋಂಕು – ಎರಡು ದಿನದಲ್ಲಿ 6 ಮಂದಿ ಸಾವು