ಹುಬ್ಬಳ್ಳಿ: ನೇಹಾ ಹತ್ಯೆ ಪ್ರಕರಣವನ್ನು ಫಾಸ್ಟ್‌ಟ್ರ್ಯಾಕ್ ಕೋರ್ಟ್‌ಗೆ (Fast Track Court) ಕೊಡುವ ಅವಶ್ಯಕತೆ ಇಲ್ಲ ಎಂಬ ಗೃಹ ಸಚಿವ ಪರಮೇಶ್ವರ್ (G Parameshwar) ಹೇಳಿಕೆಗೆ ನೇಹಾ ಹಿರೇಮಠ (Neha Hiremath) ತಂದೆ, ಕಾಂಗ್ರೆಸ್ ಪಾಲಿಕೆ ಸದಸ್ಯ ನಿರಂಜನ್ ಹಿರೇಮಠ (Niranjan Hiremath) ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಗೃಹ ಸಚಿವ ಪರಮೇಶ್ವರ್ ಸಿಎಂ ಮಾತಿಗೂ ಬೆಲೆ ನೀಡುತ್ತಿಲ್ಲ. ಅವರದ್ದೇ ಬೇರೆ ಮಾರ್ಗ ಎನ್ನುವಂತೆ ವರ್ತನೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ನಾನೇ ನ್ಯಾಯಕ್ಕಾಗಿ ಬೇಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಆರೋಪಿಗೆ ರಕ್ಷಣೆ ನೀಡಲು ಕೆಲವರು ಮುಂದಾಗಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸರ್ಕಾರಿ ಕಾಲೇಜುಗಳಲ್ಲಿ ಓದುವ ಪಿಯುಸಿ ಮಕ್ಕಳಿಗೆ ಉಚಿತ ನೀಟ್ ತರಬೇತಿ: ಮಧು ಬಂಗಾರಪ್ಪ
ಪ್ರಕರಣದ ಆರಂಭದಿಂದಲೂ ಕೆಲವು ಷಡ್ಯಂತ್ರ ನಡೆಸುತ್ತಿದ್ದು, ಈಗ ಅದನ್ನು ಮುಂದುವರಿಸುತ್ತಿದ್ದಾರೆ. ಇಷ್ಟು ದಿನ ನಮ್ಮ ಸರ್ಕಾರ ಅಂತ ಸುಮ್ಮನಿದ್ದೆ. ಈಗ ಕಾಯುವ ಅವಶ್ಯಕತೆ ಇಲ್ಲ. ಎಲ್ಲವನ್ನೂ ಜನ ಗಮನಿಸುತ್ತಿದ್ದಾರೆ. ನಾನು ಕೂಡ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಕಳಂಕಿತ ಬಿಜೆಪಿಗೆ ಹೋರಾಟ ಮಾಡುವ ನೈತಿಕತೆ ಇಲ್ಲ: ಎಂ.ಬಿ.ಪಾಟೀಲ್