ಕೋಲ್ಕತ್ತಾ: ನನಗೂ ಮಗಳು, ಮೊಮ್ಮಗಳಿದ್ದಾಳೆ. ಕೋಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ ವಿರುದ್ಧದ ಹೋರಾಟಕ್ಕೆ ಟಿಎಂಸಿ ರಾಜ್ಯಸಭಾ ಸಂಸದ ಸುಕೇಂದು ಶೇಖರ್ ರಾಯ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಾಳೆ ನಾನು ಪ್ರತಿಭಟನಾಕಾರರೊಂದಿಗೆ ಸೇರಲಿದ್ದೇನೆ. ಲಕ್ಷಾಂತರ ಬಂಗಾಳಿ ಕುಟುಂಬಗಳಂತೆ ನನಗೆ ಮಗಳು ಮತ್ತು ಪುಟ್ಟ ಮೊಮ್ಮಗಳು ಇದ್ದಾರೆ. ಮಹಿಳೆಯರ ವಿರುದ್ಧದ ಕ್ರೌರ್ಯ ಸಾಕು. ನಾವು ಒಟ್ಟಾಗಿ ವಿರೋಧಿಸೋಣ ಎಂದು ರಾಯ್ ಎಕ್ಸ್‌ನಲ್ಲಿ ಮಂಗಳವಾರ ಪೋಸ್ಟ್ ಹಾಕಿದ್ದರು.
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಬರ್ಬರ ಹತ್ಯೆ ಮತ್ತು ಅತ್ಯಾಚಾರದ ವಿರುದ್ಧ ದೇಶಾದ್ಯಂತ ವೈದ್ಯರು ತೀವ್ರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಮಹಿಳೆಯರ ಸುರಕ್ಷತೆಗಾಗಿ ಕಾನೂನು ಜಾರಿಗೆ ತರುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವ ವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ತೀವ್ರ ಪ್ರತಿಭಟನೆಯ ಪರಿಣಾಮವಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಮಂಗಳವಾರ ಈ ಆದೇಶ ಹೊರಬಿದ್ದ ಬೆನ್ನಲ್ಲೇ ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ತಲಾ ಪೊಲೀಸ್ ಠಾಣೆಗೆ ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಪೊಲೀಸರು ಸಂಗ್ರಹಿಸಿರುವ ತನಿಖಾ ವರದಿಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸಿಬಿಐಗೆ ಒಪ್ಪಿಸುವಂತೆ ಸೂಚಿಸಲಾಗಿದೆ.