ಕೋಲ್ಕತ್ತಾ: ಮಾಜಿ ಕೋಚ್ ಗ್ರೇಗ್ ಚಾಪೆಲ್ ಅವರ ಸಂಚಿನ ವಿಚಾರವನ್ನು ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ತಿಳಿಸಿದ ಮೊದಲ ವ್ಯಕ್ತಿ ನಾನು ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 2005ರ ಜಿಂಬಾಬ್ವೆ ಪ್ರವಾಸದಲ್ಲಿ ಪಂದ್ಯದ ವೇಳೆ ಹೊಟ್ಟೆನೋವು ಬಂದಿತ್ತು. ಹೀಗಾಗಿ 5 ಓವರ್ ಕಾಲ ನನಗೆ ಬ್ರೇಕ್ ಬೇಕು ಎಂದು ಅಂಪೈರ್ ಗೆ ತಿಳಿಸಿದ್ದೆ. ಬ್ರೇಕ್ ಪಡೆದು ಪೆವಿಲಿಯನ್ ಗೆ ತೆರಳಿದ್ದಾಗ ನನ್ನ ಮುಂದೆ ಚಾಪೆಲ್ ಕುಳಿತ್ತಿದ್ದರು. ಈ ವೇಳೆ ಚಾಪೆಲ್ ಅನುಮಾನಾಸ್ಪದವಾಗಿ ಏನೋ ಬರೆದು ಬಿಸಿಸಿಐಗೆ ಮೇಲ್ ಮಾಡಿದ್ದನ್ನು ಗಮನಿಸಿದೆ. ಕೂಡಲೇ ಈ ವಿಚಾರವನ್ನು ನಾನು ಗಂಗೂಲಿಗೆ ತಿಳಿಸಿದೆ. ಮಹತ್ವದ ವಿಚಾರದ ಬಗ್ಗೆ ಚಾಪೆಲ್ ಮೇಲ್ ಮಾಡಿದ್ದಾರೆ ಎಂದು ಗಂಗೂಲಿ ಅವರಲ್ಲಿ ಹೇಳಿದ್ದೆ ಎಂದು ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
Advertisement
ಗಂಗೂಲಿ ಮತ್ತು ಮಾಜಿ ಕೋಚ್ ಜಾನ್ ರೈಟ್ ನನ್ನನ್ನು ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕೆ ಇಳಿಸಿದ್ದನ್ನು ಹೇಳಿಕೊಂಡ ಸೆಹ್ವಾಗ್, ನನ್ನ ಯಾಕೆ ಓಪನಿಂಗ್ ಬ್ಯಾಟ್ಸ್ ಮನ್ ಆಗಿ ಕಳುಹಿಸುತ್ತಿದ್ದೀರಿ ಎಂದು ಗಂಗೂಲಿ ಅವರನ್ನು ಕೇಳಿದ್ದೆ. ಅದಕ್ಕೆ ಅವರು, ನಿನ್ನಲ್ಲಿ ಸಾಮರ್ಥ್ಯವಿದೆ ಎಂದು ಉತ್ತರಿಸಿದರು. ಈ ಉತ್ತರ ಬಂದ ಕೂಡಲೇ ನಾನು, 1998ರಿಂದ ನೀವು ಆರಂಭಿಕ ಆಟಗಾರರಾಗಿ ಕಣಕ್ಕೆ ಇಳಿಯುತ್ತಿದ್ದೀರಿ. ನಾನು ಮಧ್ಯಮ ಕ್ರಮಾಂಕದಲ್ಲಿ ಬರುತ್ತೇನೆ. ಯಾಕೆ ನೀವು ಸಚಿನ್ ಜೊತೆಗೆ ಇಳಿಯಬಾರದು ಎಂದು ಮರು ಪ್ರಶ್ನೆ ಹಾಕಿದೆ.
Advertisement
Advertisement
ಈ ಪ್ರಶ್ನೆಗೆ ಜಾಸ್ತಿ ನನ್ನಲ್ಲಿ ಪ್ರಶ್ನೆ ಕೇಳಬೇಡ. ಆರಂಭಿಕ ಆಟಗಾರನಾಗಿ ಇಳಿಯುವುದಿದ್ದರೆ ಇಳಿ. ಒಂದು ವೇಳೆ ಸಾಧ್ಯವಾಗದೇ ಇದ್ದರೆ ಬೆಂಚ್ ಮೇಲೆ ಕುಳಿತಿಕೋ ಎಂದು ಖಡಕ್ ಆಗಿ ಗಂಗೂಲಿ ಹೇಳಿದರು. ಇದಕ್ಕೆ ನಾನು ಅವರಲ್ಲಿ, ಒಂದು ವೇಳೆ ಮೊದಲ ಆಟಗಾರನಾಗಿ ಇಳಿದು ವೈಫಲ್ಯಗೊಂಡರೆ ಮಧ್ಯಮ ಕ್ರಮಾಂಕದಲ್ಲಿ ಕಳುಹಿಸಬೇಕು ಎಂದು ಕೇಳಿಕೊಂಡಿದ್ದೆ. ನನ್ನ ಭರವಸೆಯನ್ನು ದಾದಾ ಒಪ್ಪಿಕೊಂಡರು. ನಂತರ ನಾನು ಕೋಚ್ ಜಾನ್ ರೈಟ್ ಬಳಿ ತೆರಳಿ ಗಂಗೂಲಿ ಅವರ ಆಸೆಯನ್ನು ನಾನು ಈಡೇರಿಸುತ್ತೇನೆ ಎಂದು ತಿಳಿಸಿದೆ ಎಂಬುದಾಗಿ ಸೆಹ್ವಾಗ್ ವಿವರಿಸಿದರು.
Advertisement
ಇಂಗ್ಲೆಂಡ್ ವಿರುದ್ಧ ನಾನು ಮೊದಲ ಪಂದ್ಯವನ್ನು ಆಡಿದ್ದು 84 ರನ್ ಗಳಿಸಿ ಔಟಾಗಿದ್ದೆ. ಇದಾದ ನಂತರ ಸಚಿನ್, ಗಂಗೂಲಿ, ದ್ರಾವಿಡ್ ನನ್ನನ್ನು `ಸ್ಟುಪಿಡ್’ ಎಂದು ಕರೆದರು. ಯಾಕೆ ಈ ರೀತಿ ಕರೆದಿದ್ದು ಎಂದು ಕೇಳಿದ್ದಕ್ಕೆ ಅವರು, ಲಾರ್ಡ್ಸ್ ಮೈದಾನದಲ್ಲಿ ಯಾರೂ ಮೊದಲ ಪಂದ್ಯದಲ್ಲಿ ಶತಕ ಹೊಡೆದಿರಲಿಲ್ಲ. ಆ ಸುವರ್ಣ ಅವಕಾಶವನ್ನು ನೀನು ಕಳೆದುಕೊಂಡಿದ್ದಿ ಎಂದು ತಿಳಿಸಿದರು. ಅದಕ್ಕೆ ನಾನು, ಕನಿಷ್ಟ ಪಕ್ಷ 84 ರನ್ ಹೊಡೆದಿದ್ದಕ್ಕೆ ನನಗೆ ಸಂಪೂರ್ಣ ತೃಪ್ತಿ ಸಿಕ್ಕಿದೆ ಎಂದು ಅಂದು ನಾನು ಹೇಳಿದ್ದೆ ಎಂದು ತಿಳಿಸಿದರು.
2005 ರಿಂದ 2007ರವರೆಗೆ ಚಾಪೆಲ್ ಟೀಂ ಇಂಡಿಯಾದ ಕೋಚ್ ಆಗಿ ನೇಮಕವಾಗಿದ್ದರು. ಜಿಂಬಾಬ್ವೆ ಪ್ರವಾಸದಲ್ಲೇ ಸೌರವ್ ಗಂಗೂಲಿ ಅವರನ್ನು ತಂಡದಿಂದ ಚಾಪೆಲ್ ಹೊರಹಾಕಿದ್ದರು. ಇವರ ಅವಧಿಯಲ್ಲಿ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ವಿಚಾರದಿಂದಲೇ ಹೆಚ್ಚು ಸುದ್ದಿಯಾಗುತಿತ್ತು. ಗಂಗೂಲಿ, ಸೆಹ್ವಾಗ್ ಅಲ್ಲದೇ ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಸಹ ಚಾಪೆಲ್ ಹಲವು ವೇದಿಕೆಗಳಲ್ಲಿ ಚಾಪೆಲ್ ಅವರ ವಿರುದ್ಧ ಅಸಮಾಧಾವನ್ನು ವ್ಯಕ್ತಪಡಿಸಿದ್ದರು.