– ನಾನ್ಯಾರಿಗೂ ರಾಜೀನಾಮೆ ನೀಡಲು ಹೇಳಿಲ್ಲ
– ವೈಯಕ್ತಿಕ ಬೇಸರದಿಂದ ರಾಜೀನಾಮೆ
ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಹೊರತು ಕಾಂಗ್ರೆಸ್ ಪಕ್ಷಕ್ಕೆ ಅಲ್ಲ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.
ತನ್ನ ರಾಜೀನಾಮೆಯ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಯಾರಿಗೂ ನಡುಕ ಹುಟ್ಟಿಸಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಹೊರತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಕಾಂಗ್ರೆಸ್‍ನ ಹಿರಿಯ ನಾಯಕರು ಯಾವುದೇ ಕಾರಣಕ್ಕೂ ಪಕ್ಷ ಬಿಡಬಾರದು ಎಂದು ಹೇಳಿದ್ದಾರೆ. ನಾನು ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದೇನೆ. ಅವರಿಗೆ ಮೊದಲೇ ಕಾರಣ ಗೊತ್ತಿತ್ತು. ನಾನು ಪುನಃ ಕಾರಣವನ್ನು ತಿಳಿಸಿದ್ದೇನೆ ಎಂದರು.
Advertisement
Advertisement
ಹೈಕಮಾಂಡ್‍ನಿಂದ ಯಾರಿಗೆ ಕರೆ ಮಾಡಿಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಮಾತ್ರ ಕರೆ ಮಾಡಿ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ಪತ್ರವನ್ನು ಹಿಂಪಡೆಯಲ್ಲ. ಸ್ಪೀಕರ್ ಎಲ್ಲರನ್ನು ಕರೆದು ಮಾತನಾಡಿಸುತ್ತಾರೆ. ನನ್ನ ಒಬ್ಬನ ರಾಜೀನಾಮೆಯಿಂದ ದೋಸ್ತಿ ಸರ್ಕಾರಕ್ಕೆ ಏನೂ ಆಗುವುದಿಲ್ಲ. ನಾನು ಯಾರಿಗೂ ರಾಜೀನಾಮೆ ನೀಡಿ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರು ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವುದರಿಂದ ದೆಹಲಿಗೆ ತೆರಳಿದ್ದರು. ಅಲ್ಲಿ ಸಭೆ ಇತ್ತು. ಹಾಗಾಗಿ ಅವರು ಅಲ್ಲಿ ಹೋಗಿದ್ದರು. ಅಲ್ಲಿ ಹೋಗಿದ್ದ ಕಾರಣ ನಾಯಕರು ಹಾಗೂ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ಸೌಮ್ಯಾ ಅಲ್ಲಿ ಏನೂ ಮಾತನಾಡಿದ್ದಾಳೆ ಎಂಬುದು ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ನನಗೆ ವೈಯಕ್ತಿಕವಾಗಿ ಬೇಸರ ಇತ್ತು. ಹಾಗಾಗಿ ನಾನು ರಾಜೀನಾಮೆ ನೀಡಿದ್ದೇನೆ. ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಈ ಹಿಂದೆ ಸಾಕಷ್ಟು ಬಾರಿ ನನ್ನ ಬೇಸರದ ಬಗ್ಗೆ ಹೇಳಿದ್ದೇನೆ. ನಾನು ಮತ್ತೆ ಹೇಳಲು ಇಷ್ಟಪಡುವುದಿಲ್ಲ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.