ಯಾದಗಿರಿ: ದೇಶಾಭಿಮಾನದ ಬಗ್ಗೆ ನಾನು ಬಿಜೆಪಿಯಿಂದ ಪಾಠ ಕಲಿಯಬೇಕಾಗಿಲ್ಲ. ಬಿಜೆಪಿಯವರು ರಾಷ್ಟ್ರಪಿತ ಮಹತ್ಮಾ ಗಾಂಧೀಜಿಯವರನ್ನು ಕೊಂದವರು ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿ ಅವರು, ಭಾರತೀಯ ಸೇನೆಯ ಸಾಧನೆಯನ್ನು ರಾಜಕೀಯಕ್ಕೆ ಬಳಿಸಿಕೊಳ್ಳುವುದು ಸರಿಯಲ್ಲ. ಆರ್ಥಿಕ, ಸಾಮಾಜಿಕ ಸೇರಿದಂತೆ ಯಾವುದೇ ವಿಚಾರದಲ್ಲಿಯೂ ಪಾಕಿಸ್ತಾನ ನಮಗೆ ಸಮಾನವಾಗಿಲ್ಲ. ಬಿಜೆಪಿಯವರು ಪಾಕಿಸ್ತಾನದ ಹೆಸರನ್ನು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಇದು ತಪ್ಪು ಎಂದು ನಾನು ಈಗಾಗಲೇ ಅನೇಕ ಬಾರಿ ಹೇಳಿದ್ದೇನೆ ಎಂದರು. ಇದನ್ನು ಓದಿ: ಭಯ ಉಂಟು ಮಾಡುವ ರೀತಿಯಲ್ಲಿ ಮೋದಿ ಆಳ್ವಿಕೆ: ಬಿ.ವಿ.ನಾಯಕ್
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯೊ ಅವರು ಇಂದಿರಾ ಗಾಂಧಿ ಅವರನ್ನು ದುರ್ಗಿ ಎಂದು ವರ್ಣನೆ ಮಾಡಿದರು. ಇಂದಿರಾ ಗಾಂಧಿ ಅವರು ಪಾಕಿಸ್ತಾನಕ್ಕೆ ಅನೇಕ ಬಾರಿ ಉತ್ತರ ನೀಡಿದ್ದಾರೆ. ಆದರೆ ಅವರು ಸೇನೆಯ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲಿಲ್ಲ ಎಂದು ತಿಳಿಸಿದರು.
ಪಾಕಿಸ್ತಾನದ ಪರ ಮಾತನಾಡಿದ್ದಾರೆಂದು ಬಿ.ವಿ.ನಾಯಕ್ ವಿರುದ್ಧ ಬಿಜೆಪಿಯವರು ಈಗಾಗಲೇ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದೇ ರೀತಿಯ ತಪ್ಪು ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನನ್ನ ವಿರುದ್ಧ ದೂರು ನೀಡಿದರೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದರು.