ರಾಮನಗರ: (Ramanagara) ನನಗೆ ನೀವು ಕೊಟ್ಟಿರುವ ಪೊಷಿಷನ್ ಸಾಕು, ಇನ್ಯಾವ ಪೊಷಿಷನ್ ಬೇಡ. ನನಗೆ ಇದೀಗ 60 ವರ್ಷ ತುಂಬಿದೆ ಎಂದು ರಾಜಕೀಯ ನಿವೃತ್ತಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಸುಳಿವು ನೀಡಿದ್ದಾರೆ.
ಆಯುಧ ಪೂಜೆ ದಿನ ಕನಕಪುರದ ತಮ್ಮ ನಿವಾಸದಲ್ಲಿ ಶಿಕ್ಷಣ ಸಂಸ್ಥೆಯ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿರುವ ವೀಡಿಯೋ ವೈರಲ್ ಆಗಿದೆ. ನಾನು ಇನ್ನು 8-10 ವರ್ಷ ಮಾತ್ರ ರಾಜಕಾರಣ ಮಾಡಬಹುದು. ಆ ನಂತರ ರಾಜಕೀಯ ಮಾಡಲು ಆಗಲ್ಲ. ಕನಕಪುರ ಕ್ಷೇತ್ರದ ಜನರು ನನಗೆ ಮತ ನೀಡಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ನಾನು ರಾಜಕೀಯ ನಿವೃತ್ತಿ ಪಡೆಯುವುದರ ಒಳಗಾಗಿ ಈ ಶಿಕ್ಷಣ ಸಂಸ್ಥೆಯಲ್ಲಿ ಏನಾದರೂ ಬದಲಾವಣೆ ತರಬೇಕು ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ ಒಪ್ಪಿಗೆ – ಹಾಲಿ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?
ನಾನು ಯಾವುದೇ ಪ್ರತಿಫಲ ನಿರೀಕ್ಷೆ ಮಾಡುವುದಿಲ್ಲ. ನಾನು ಸಾಕಷ್ಟು ಸಂಪಾದನೆ ಮಾಡಿದ್ದೇನೆ. ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ನನ್ನ ಮೇಲೆ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಅವೆಲ್ಲವನ್ನೂ ಅನುಭವಿಸುತ್ತೇನೆ ಎಂದು ಹೇಳಿದ್ದಾರೆ.
ಈ ತಾಲೂಕಿನಲ್ಲಿ ಯಾವುದೇ ವಿಚಾರಕ್ಕೂ ಯಾರ ಮುಂದೆಯೂ ಕೈಚಾಚಿಲ್ಲ. ಯಾವುದೇ ಕಾಮಗಾರಿಯಲ್ಲೂ ಕಮಿಷನ್ ಪಡೆದಿಲ್ಲ. ಜಾತಿ ಮೇಲೆ ನನಗೆ ನಂಬಿಕೆ ಇಲ್ಲ. ನೀತಿಯ ಮೇಲೆ ನನಗೆ ನಂಬಿಕೆ ಇದೆ ಅಷ್ಟೇ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತ್ರಿಭಾಷಾ ಸೂತ್ರಕ್ಕೆ ಸಮಾಧಿ ಕಟ್ಟಲು ಕೇಂದ್ರ ಸರ್ಕಾರ ಹೊರಟಿದೆ – ಹೆಚ್‌ಡಿಕೆ ಆಕ್ರೋಶ
ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಶಾಸಕ ಸಿಂಧ್ಯ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿ ಹಲವರು ರಾಜಕೀಯ ಮಾಡಿದ್ದಾರೆ. ಆದರೆ ಅವರ‍್ಯಾರು ಶಿಕ್ಷಣ ಸಂಸ್ಥೆಗೆ ಅಷ್ಟು ಕೆಲಸ ಮಾಡಿಲ್ಲ. ನಾನು ಬಂದ ಮೇಲೆ ಸಾಕಷ್ಟು ಕೆಲಸ ಮಾಡಿದ್ದೇನೆ. ಇನ್ನುಳಿದದ್ದನ್ನ ಈಗ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಕಳೆದ 25 ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ. ಈಗಿನ ಶಿಕ್ಷಣ ಸಂಸ್ಥೆ ಬಗ್ಗೆ ನಂಬಿಕೆ ಇಲ್ಲ. ಅದನ್ನು ಬದಲಾಯಿಸಬೇಕು ಎಂದಿದ್ದಾರೆ.