ಮಂಡ್ಯ: 2018ಕ್ಕೆ ಯಾರಾದ್ರೂ ಒಬ್ರು ಸಿಎಂ ಆಗ್ಲೇಬೇಕು. ಆದ್ರೆ ಯಾವ ಗಣಿತದ ಲೆಕ್ಕಚಾರದಲ್ಲಿ ಕುಮಾರಸ್ವಾಮಿಯವರು ಸಿಎಂ ಆಗ್ತೀನಿ ಅಂತಾ ಹೇಳಿದ್ರೋ ಗೊತ್ತಿಲ್ಲ. ಅವರು ಮುಖ್ಯಮಂತ್ರಿ ಆದ್ರೆ ನಾವು ಬೇಜಾರು ಮಾಡಿಕೊಳ್ಳಲ್ಲ ಅಂತಾ ಬಂಡಾಯ ಶಾಸಕ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಮಾತನಾಡಿದ ಚೆಲುವರಾಯಸ್ವಾಮಿ, ನಾವು ಯಾವುದಾದರೂ ಒಂದು ಪಕ್ಷಕ್ಕೆ ಸೇರಲೇ ಬೇಕು. ಈ ಬಗ್ಗೆ ಸಂದರ್ಭ ಬಂದಾಗ ಹೇಳುತ್ತೇವೆ. ಕಾಂಗ್ರೆಸ್‍ನವರು ನಮ್ಮ ಜೊತೆ ಮಾತನಾಡಿದ್ದಾರೆ. ಇಲ್ಲ ಅಂತಾ ಹೇಳಲ್ಲ. ನಾವು ಯಾವ ಪಕ್ಷ ಸೇರುತ್ತೇವೆ ಎಂದು ಘೋಷಣೆ ಮಾಡೋ ಅಗತ್ಯವಿಲ್ಲ. ನಾವೀಗ ಅಮಾನತ್ತಿನಲ್ಲಿದ್ದೇವೆ. ಆದಷ್ಟು ಒಂದೆಡೆ ಕುಳಿತು ಮಾತನಾಡಿ ಮುಂದಿನ ತೀರ್ಮಾನಕ್ಕೆ ಬರುತ್ತೇವೆ ಅಂದ್ರು.
Advertisement
ಬಂಡಾಯ ಶಾಸಕರಲ್ಲಿ ಒಬ್ಬರು ಬಿಟ್ಟು ಹೋಗಿರೋದಕ್ಕೆ ತೊಂದರೆಯಿಲ್ಲ. ನಾವು ಎಂಟೇ ಜನ ಹೋಗಬೇಕು ಅಂದುಕೊಂಡಿರಲಿಲ್ಲ. ಅದು ಆಕಸ್ಮಿಕವಾಗಿ ಉಂಟಾಯ್ತು. ಇವತ್ತು ಏಳು ಆಗಿವೆ. ಮುಂದೆ ಇನ್ನೆರೆಡು ಜಾಸ್ತಿಯೇ ಆಗಬಹುದು. ಆದ್ರೆ ನಮಗೆ ಜಾಸ್ತಿ ಮಾಡಬೇಕು ಎಂಬ ಪೈಪೋಟಿ ಇಲ್ಲ. ಕಳೆದ ಏಳೆಂಟು ವರ್ಷದಿಂದ ನಡೆದ ಪರಿಸ್ಥಿತಿಯಿಂದ ಈ ತೀರ್ಮಾನಕ್ಕೆ ಬಂದಿದ್ದೇವೆ. ಈಗಾಗಲೇ ದೇವೇಗೌಡರು ಹಾಗೂ ಕುಮಾರಸ್ವಾಮಿ ಬಂಡಾಯ ಶಾಸಕರನ್ನ ಸೇರಿಸಲ್ಲ ಅಂತಾ ಹೇಳಿದ್ದಾರೆ. ಅದೇ ರೀತಿ ನಾವು ಸೇರಿಸಿಕೊಳ್ಳಿ ಅಂತಾ ಕೇಳಿಲ್ಲ ಅಂತ ಚೆಲುವರಾಯಸ್ವಾಮಿ ತಿಳಿಸಿದ್ರು.