ಬೆಂಗಳೂರು: ಹಿಂದಿನ ಸಿಎಂ ಟೈಂ ನನಗೆ ಬೇಕಿಲ್ಲ, ನಿಗದಿಯಾಗಿದ್ದ ಸಮಯಕ್ಕೆ ಸಭೆ ನಡೆಸುತ್ತೇನೆ. ಎಲ್ಲ ಅಧಿಕಾರಿಗಳು ಶಿಸ್ತು ಪಾಲಿಸುವುದು ಕಡ್ಡಾಯ ಎಂದು ವಿಧಾನಸೌಧದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ವಿಧಾನಸೌಧದ ನೆಲಮಹಡಿಯಲ್ಲಿರುವ ಸ್ವೀಕೃತಿ ಮತ್ತು ರವಾನೆ ಶಾಖೆಗೆ ದಿಢೀರ್ ಭೇಟಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸದ ಹಿನ್ನೆಲೆಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಸರಿಯಾದ ಸಮಯಕ್ಕೆ ಕೆಲಸಕ್ಕೆ ಆಗಮಿಸದ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.
Advertisement
Advertisement
ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ವೇಳೆ ಅಧಿಕಾರಿಗಳು ಇನ್ನೂ ಆಗಮಿಸಿರಲಿಲ್ಲ. ತಡವಾದರೂ ಆಗಮಿಸದ ಸಿಬ್ಬಂದಿಯ ವರ್ತನೆಗೆ ಸಿಎಂ ಕೆಂಡಾಮಂಡಲರಾಗಿದ್ದು, ಸರ್ಕಾರಿ ಕೆಲಸದ ವೇಳೆಯಲ್ಲಿ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಕಚೇರಿಯಲ್ಲಿ ಹಾಜರಿರಬೇಕು. ಸರಿಯಾದ ಸಮಯಕ್ಕೆ ಕೆಲಸಕ್ಕೆ ಬರಬೇಕು. ಇಲ್ಲವಾದಲ್ಲಿ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Advertisement
ಇದೇ ವೇಳೆ ಮೇಲಧಿಕಾರಿಗಳಿಗೂ ಸಿಎಂ ವಾರ್ನ್ ಮಾಡಿದ್ದಾರೆ. ಹಿಂದಿನ ಸಿಎಂ ಟೈಂ ನನಗೆ ಬೇಕಿಲ್ಲ. ನಿಗದಿಯಾಗಿದ್ದ ಸಮಯಕ್ಕೆ ನಾನು ಸಭೆ ನಡೆಸುತ್ತೇನೆ. ಎಲ್ಲ ಅಧಿಕಾರಿಗಳು ಸಮಯ ಹಾಗೂ ಶಿಸ್ತು ಪಾಲಿಸುವುದು ಕಡ್ಡಾಯ. ನಿಮ್ಮ ಕೆಳ ಸಿಬ್ಬಂದಿಗೂ ಈ ಕುರಿತು ಎಚ್ಚರಿಕೆ ನೀಡಿ ಎಂದು ಸ್ಥಳದಲ್ಲೇ ಅಧಿಕಾರಿಗಳಿಗೆ ಸಿಎಂ ಗುಡುಗಿದ್ದಾರೆ.
Advertisement
ಆರ್ಥಿಕ ಇಲಾಖೆ ಸಭೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ರಾಜ್ಯದ ಹಣಕಾಸು ಪರಿಸ್ಥಿತಿ ಕುರಿತು ಮಾಹಿತಿ ಪಡೆದರು. ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಮುಖ್ಯಮಂತ್ರಿಯವರ ಸಲಹೆಗಾರ ಎಂ.ಲಕ್ಷ್ಮೀನಾರಾಯಣ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.