ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು 50 ಕೋಟಿ ರೂ.ಗೆ ಬುಕ್ ಆಗಿದ್ದಾರೆ ಎಂಬ ವಿಚಾರ ಆಡಿಯೋದಲ್ಲಿ ಪ್ರಸ್ತಾಪವಾಗಿರುವುದಕ್ಕೆ ಸಂಬಂಧಪಟ್ಟಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನನಗೆ ನಿಮ್ಮ ಮೇಲೆ ಎಳ್ಳಷ್ಟು ಕೂಡ ಅನುಮಾನ ಬರಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಇಂದಿನ ಅಧಿವೇಶನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು, “ಸಿದ್ದರಾಮಯ್ಯ ನಿಮಗೂ ನನ್ನ ಮೇಲೆ ಅನುಮಾನನಾ? ನೀವು ನನಗೆ ಒಂದು ಮಾತು ಹೇಳಲಿಲ್ಲ. ನೀವು ನನಗೆ ಸಹಾನುಭೂತಿ ಕೂಡ ಹೇಳಲಿಲ್ಲ. ಈಗ ನಾನು ಸಹಾಯಕ್ಕೆ ಯಾರ ಬಳಿ ಹೋಗಲಿ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕುಟುಕಿದ್ರು.
Advertisement
ಈ ವೇಳೆ ಮಾತು ಆರಂಭಿಸಿದ ಸಿದ್ದರಾಮಯ್ಯ ಅವರು ನನಗೆ ನಿಮ್ಮ ಮೇಲೆ ಎಳ್ಳಷ್ಟು ಕೂಡ ಅನುಮಾನ ಬರಲು ಸಾಧ್ಯವೇ ಇಲ್ಲ. ಏಕೆಂದರೆ ನಾನು ಬಹಳ ವರ್ಷಗಳಿಂದ ನಿಮ್ಮ ವೈಯಕ್ತಿಕ ಬದುಕು ಸಾರ್ವಜನಿಕ ಬದುಕನ್ನು ನೋಡ್ತಾ ಬಂದಿದ್ದೇನೆ. ನಿಮ್ಮ ನಡವಳಿಕೆ, ನೀವು ಹೇಗೆ ಬದುಕಿದ್ದೀರಿ ಎಂಬುದನ್ನು ಬಹಳ ಹತ್ತಿರದಿಂದ ನೋಡಿದ್ದೀನಿ. ಹಾಗಾಗಿ ಅನುಮಾನ ಪಡೋ ಪ್ರಶ್ನೆನೇ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಜನರಿಂದ ಆಯ್ಕೆ ಆಗಿ ಇಲ್ಲಿ ಬಂದು ನಮ್ಮ ನಡುವಳಿಕೆ ಬಗ್ಗೆ ಜನರು ಏನು ಹೇಳುತ್ತಾರೆ ಎಂಬುದು ಮುಖ್ಯವಾಗುತ್ತದೆ ಎಂದರು.
Advertisement
Advertisement
ಈಗ ಇಲ್ಲಿ ಚರ್ಚೆ ಆಗುತ್ತಿರುವ ವಿಷಯ ಬಹಳ ಸ್ಪಷ್ಟವಾಗಿದೆ. ಇದು ಸದನದ ಒಳಗೆ ಆಗಿಲ್ಲ, ಹೊರಗಡೆ ಯಾರೋ ಮಾತನಾಡಿದ್ದರು ಎಂದು ಶಾಸಕ ಮಾಧುಸ್ವಾಮಿ ಹೇಳಿದ್ದರು. ಇದು ಹೊರಗಡೆಯವರು ಮಾತನಾಡಿದ್ದಲ್ಲ. ಆದ್ರೆ ಇದು ನಾವು ಹಗುರವಾಗಿ ತೆಗೆದುಕೊಳ್ಳುವಂತಹ ವಿಷಯ ಅಲ್ಲ. ಈ ಸದನ ನಿಮ್ಮನ್ನು ಸರ್ವಾನು ಮತದಿಂದ ಆಯ್ಕೆ ಮಾಡಿ ಅಲ್ಲಿ ಕೂರಿಸಿದ್ದಾರೆ. ಈ ಸ್ಥಾನದ ಗೌರವವನ್ನು ಎತ್ತಿ ಹಿಡಿಯುವುದು ನಮ್ಮೆಲ್ಲರ ಜವಬ್ದಾರಿ. ಒಬ್ಬ ಸದಸ್ಯರ ಅಲ್ಲ 125 ಸದಸ್ಯರ ಜವಾಬ್ದಾರಿ. ಯಾವುದೇ ಸದಸ್ಯರು ಕೂಡ ಆಧಾರ ರಹಿತವಾಗಿ ನಿಮ್ಮ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ರು.
Advertisement
ಮಾಧುಸ್ವಾಮಿ ಅವರು ಭಾವನಾತ್ಮಕವಾಗಿ ಹೇಳಿದ್ದರು. ಆದರೆ ಇದು ಭಾವನಾತ್ಮಕ ಆಗುವ ವಿಷಯ ಅಲ್ಲ. ಸಾರ್ವಜನಿಕರು ಏನು ಹೇಳುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಅದಕ್ಕೆ ಎಲ್ಲರಿಗೂ ಸತ್ಯ ಗೊತ್ತಾಗುತ್ತೆ. ಧ್ವನಿ ಸುರುಳಿಯಲ್ಲಿ ರಾಜೀನಾಮೆ ಕೊಡಿಸುತ್ತೇನೆ ಎಂಬುದು ಸ್ಪಷ್ಟವಾಗಿದೆ. ರಾಜೀನಾಮೆ ಒಪ್ಪಿಕೊಳ್ಳೋಕೆ ಸ್ಪೀಕರ್ ಗೆ 50 ಕೋಟಿ ರೂ. ಕೊಟ್ಟು ಬುಕ್ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಇದು ಸಾರ್ವಜನಿಕರಿಗೆ ಯಾವ ರೀತಿ ಸಂದೇಶ ಹೋಗುತ್ತದೆ ಎಂಬುದು ಮುಖ್ಯವಾಗುತ್ತದೆ. ಇದರಿಂದ ಇದರ ಸತ್ಯ ಹೊರಗಡೆ ಬರಬೇಕು. ಇದು ಗಂಭೀರ ವಿಷಯ ಆಗುತ್ತದೆ. ಇದು ನಿಮ್ಮ ಹಾಗೂ ಸದನದ ಗೌರವದ ವಿಚಾರವಾಗಿದೆ ಅಂದ್ರು.
ಕಳೆದ ಆರೇಳು ತಿಂಗಳಿನಿಂದ ಏನು ನಡೆಯುತ್ತಿದೆ ಎಂಬುದು ಎಲ್ಲರೂ ದಿನನಿತ್ಯ ನೋಡುತ್ತಿದ್ದಾರೆ. ಈ ಇಡೀ ಘಟನೆ ಅಥವಾ ಸಂಭಾಷನೆ ಬಗ್ಗೆ ತನಿಖೆ ಆಗಬೇಕು, ಸತ್ಯ ಗೊತ್ತಾಗಬೇಕು. ನಿಮ್ಮ ಬಗ್ಗೆ ಅಗೌರವ ತೋರಿಸುವ ಕೆಲಸ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿ ಆಗಿದೆ. ರಾಷ್ಟ್ರದ ಜನರ ಬಾಯಿಗೆ ಸುದ್ದಿ ಆಗಿದೆ. ಈ ಬಗ್ಗೆ ತನಿಖೆ ಆಗಬೇಕಿದೆ ಹಾಗೂ ತಪ್ಪಿಸ್ಥತರ ಶಿಕ್ಷೆ ಆಗಬೇಕಿದೆ. ನಾನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ ನನಗೆ ಹಾಗೂ ಯಾವ ಸದಸ್ಯರಿಗೂ ನಿಮ್ಮ ಮೇಲೆ ಅನುಮಾನ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv