ಮಂಡ್ಯ: ನಾನು ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್ ಹಾಗೂ ಟೀಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಕ್ಷೇತ್ರ ಬಿಟ್ಟು ದೆಹಲಿಗೆ ಹಾಲಿಡೇ ಟ್ರಿಪ್‍ಗೆ ತೆರಳಿರಲಿಲ್ಲ. ಅಧಿವೇಶನಕ್ಕೆ ತೆರಳಿದ್ದೆ ಎಂದು ಸಂಸದೆ ಸುಮಲತಾ ಅಂಬರೀಷ್ ಸ್ಪಷ್ಟಪಡಿಸಿದ್ದಾರೆ.
ನಿಖಿಲ್ ಎಲ್ಲಿದ್ಯಪ್ಪಾ ಎಂದು ಟ್ರೋಲ್ ಮಾಡಿದ ರೀತಿಯಲ್ಲಿ, ಸುಮಲತಾ ಎಲ್ಲಿದ್ಯಮ್ಮಾ ಎಂದು ಟ್ರೋಲ್ ಮಾಡಲಾಗುತ್ತಿತ್ತು. ಇದಕ್ಕೆ ಪ್ರತಿಕ್ರಿಸಿರುವ ಅವರು, ಸೋಶಿಯಲ್ ಮೀಡಿಯಾದ ಟ್ರೋಲ್ ಹಾಗೂ ಟೀಕೆಗಳನ್ನು ಗಂಭಿರವಾಗಿ ಪರಿಗಣಿಸುವುದಿಲ್ಲ. ನಾನು ರಜೆಯ ಮಜಾ ಮಾಡಲು ದೆಹಲಿಗೆ ಹೋಗಿರಲಿಲ್ಲ. ಬದಲಿಗೆ ಅಧಿವೇಶನಕ್ಕೆ ತೆರಳಿದ್ದೆ. ಮೊದಲ ಬಾರಿಗೆ ಆಯ್ಕೆಯಾಗಿದ್ದೇನೆ. ಸದನಕ್ಕೆ ಹಾಜರಾಗದಿದ್ದಲ್ಲಿ ಜನರಲ್ಲಿ ತಪ್ಪು ತಿಳುವಳಿಕೆ ಉಂಟಾಗುತ್ತದೆ. ಹೀಗಾಗಿ ಅಧಿವೇಶನದಲ್ಲಿ ಭಾಗವಹಿಸಿದ್ದೆ ಎಂದು ತಿಳಿಸಿದ್ದಾರೆ.
Advertisement
Advertisement
ಒಬ್ಬ ಸಂಸದೆಯಾಗಿ ಕೇಂದ್ರದ ನಾಯಕರೊಂದಿಗೆ ಸಂಪರ್ಕ ಸಾಧಿಸದಿದ್ದಲ್ಲಿ ಕ್ಷೇತ್ರದ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಏನೇ ಟೀಕೆ ಮಾಡಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಸರಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂಬ ನಂಬಿಕೆ ನನಗಿದೆ ಎಂದರು.
Advertisement
ದರ್ಶನ್ ಬರುತ್ತಿಲ್ಲ, ಯಶ್ ಬರುತ್ತಿಲ್ಲ ಎಂದು ಹೇಳುವುದಲ್ಲ ಸಮಸ್ಯೆ ಪರಿಹಾರಕ್ಕೆ ಎಲ್ಲರೂ ಕೆಲಸ ಮಾಡಬೇಕು. ಡೇಂಜರ್, ರೆಡ್ ಅಲರ್ಟ್ ರೀತಿಯ ವಾತಾವರಣ ಮಂಡ್ಯದಲ್ಲಿಲ್ಲ. ಡೇಂಜರ್ ರೀತಿಯಲ್ಲಿ ಯಾವುದೇ ಪ್ರವಾಹವಿಲ್ಲ ಎಂದು ಎಸ್‍ಪಿ ಮಾಹಿತಿ ನೀಡಿದ್ದಾರೆ. ಕಾವೇರಿ ನೀರಿನ ವಿಚಾರ ಕಾವೇರಿ ಪ್ರಾಧಿಕಾರದ ಅಡಿಯಲ್ಲಿ ನಡೆಯಲಿದೆ. ಕಾವೇರಿ ಟ್ರಿಬ್ಯುನಲ್ ವಿಚಾರದಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.
Advertisement
ಮಂಗಳವಾರದಿಂದ ಸೆಪ್ಟೆಂಬರ್ ವರೆಗೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದೇನೆ. ಅಧಿಕಾರಿಗಳು, ಸಾರ್ವಜನಿಕರ ಜೊತೆ ಸಭೆ ಕರೆದು ಚರ್ಚಿಸಲಾಗುವುದು. ಸಮಾವೇಶದಿಂದ ಸಮಯ ವ್ಯರ್ಥವಾಗಲಿದೆ. ಹೀಗಾಗಿ ಸಮಾವೇಶದ ಬದಲಿಗೆ ಜನರ ಬಳಿಗೆ ಹೋಗುತ್ತೇವೆ. ಜನತಾ ದರ್ಶನದ ಬಗ್ಗೆಯೂ ಚಿಂತನೆ ನಡೆಸಲಾಗಿದ್ದು, ಅಧಿಕೃತವಾಗಿ ಕಚೇರಿ ತೆರೆಯಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇನೆ. ಈ ಮೂಲಕ ಜನರ ಸಮಸ್ಯೆ ಪರಿಹಾರ, ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಲಾಗುವುದು ಎಂದು ತಿಳಿಸಿದರು.
ನೆರೆ ಪೀಡಿತರ ನೆರವಿಗೆ ಸಿನಿಮಾ ಇಂಡಸ್ಟ್ರಿ ಮೂಲಕ ಪರಿಹಾರ ನೀಡುವ ಕುರಿತು ಚರ್ಚೆ ನಡೆದಿದೆ. ಇನ್ನೆರಡು ದಿನಗಳಲ್ಲಿ ಈ ಕುರಿತು ಅಂತಿಮ ಚರ್ಚೆ ನಡೆಸಲಾಗುವುದು. ಆದರೆ, ಕನ್ನಡ ಫಿಲ್ಮ್ ಇಂಡಸ್ಟ್ರಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಉತ್ತಮ ನಿರ್ಧಾರ
ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಉತ್ತಮವಾಗಿದೆ. ನಾವು ಹಲವು ಬಾರಿ ಶೂಟಿಂಗ್‍ಗಾಗಿ ಕಾಶ್ಮೀರಕ್ಕೆ ತೆರಳಿದಾಗ ಅಲ್ಲಿನ ಹಲವು ಷರತ್ತುಗಳು ಅರಿವಿಗೆ ಬಂದಿದ್ದವು. ಇದ್ಯಾವ ನ್ಯಾಯ ಎಂದು ಮನಸ್ಸಿಗೆ ಆಗಲೇ ಅನ್ನಿಸಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ. ರದ್ದಾಗಿರುವುದು ಸಂತೋಷ ತಂದಿದೆ ಎಂದು ಸುಮಲತಾ ತಿಳಿಸಿದರು.
ಪ್ರಧಾನಿಯವರನ್ನು ಭೇಟಿ ಮಾಡಿದ ವೇಳೆ ಮಂಡ್ಯದ ಅಭಿವೃದ್ಧಿಗೆ ಮನವಿ ಮಾಡಿದ್ದೆ. ನಿಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗುವುದು ಎಂದು ತಿಳಿಸಿದ್ದರು. ಡ್ಯಾಂ ಸೇಫ್ಟಿ ಬಿಲ್ ವಿಚಾರ ಬಂದಾಗ ಕೆಆರ್ ಎಸ್ ಬಗ್ಗೆ ಮಾತನಾಡಿದ್ದು, ಲೋಕಸಭೆಯಲ್ಲಿ ಗಮನ ಸೆಳೆಯಲಾಗುವುದು. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಗಳು ಸಭೆ ಕರೆದಾಗಲೂ ಈ ಕುರಿತು ಮನವಿ ಮಾಡಿದ್ದೇನೆ. ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದರು.