– ಮುಂದುವರಿದ ಜಾತಿ ಹೆಸರಿನಲ್ಲಿ ಸಮಾವೇಶ ಮಾಡಿದರೆ ಅದು ಜಾತೀಯತೆ
– ಹಿಂದುಳಿದ ವರ್ಗದವರು ಸಮಾವೇಶ ಮಾಡಿದರೆ ಅದು ಜಾತೀಯತೆ ಆಗಲ್ಲ
ಬೆಂಗಳೂರು: ನನ್ನನ್ನು ದುರಹಂಕಾರಿ ಎನ್ನುತ್ತಾರೆ. ಐ ಡೋಂಟ್ ಕೇರ್, ನಾನು ಸ್ವಾಭಿಮಾನಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಶ್ರೀ ಕಾಗಿನೆಲೆ (Kaginele Mutt) ಮಹಾಸಂಸ್ಥಾನ ಕನಕಗುರುಪೀಠ, ಶಾಖಾಮಠ, ಕೇತೋಹಳ್ಳಿ ಬೆಂಗಳೂರಿನ ಭಕ್ತ ಭಂಡಾರದ ಕುಟೀರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಮ್ಮ ಸಮುದಾಯದವರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ವಿದ್ಯಾವಂತರಾದರೆ ಸ್ವಾಭಿಮಾನ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಮೇಲ್ವರ್ಗದ ಬಡವ ಬಂದರೆ ಏನು ಸ್ವಾಮಿ ಎನ್ನುತ್ತಾರೆ. ದಲಿತನೊಬ್ಬ (Dalits) ವಿದ್ಯಾವಂತ ಶ್ರೀಮಂತ ಬಂದರೆ ಏಕವಚನದಲ್ಲಿ ಮಾತನಾಡಿಸುತ್ತಾರೆ. ನನ್ನನ್ನು ನೋಡಿದಾಗ ಕೆಲವರು ಸಿದ್ದರಾಮಯ್ಯಗೆ ದುರಹಂಕಾರ ಎನ್ನುತ್ತಾರೆ. ಆದರೆ ನಾನು ಸ್ವಾಭಿಮಾನಿಯೇ ಹೊರತು ದುರಹಂಕಾರಿ ಅಲ್ಲ. ನನ್ನನ್ನ ದುರಹಂಕಾರಿ ಅಂದರೆ ಕೇರ್ ಮಾಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: Heart Attack | ರಾಜ್ಯದಲ್ಲಿಂದು ಐವರು ಬಲಿ – ವಿದ್ಯಾರ್ಥಿಗಳ ಹೃದಯ ತಪಾಸಣೆಗೆ ರಾಜಣ್ಣ ಸೂಚನೆ
ಪ್ರಜಾಪ್ರಭುತ್ವದಲ್ಲಿ ಮಾತನಾಡುವ ಹಕ್ಕಿದೆ. ಅವರು ದುರಹಂಕಾರಿ ಅಂದರು ಐ ಡೋಂಟ್ ಕೇರ್. ನಿಮ್ಮನ್ನು ದುರಹಂಕಾರಿ ಅಂದರೂ ಸ್ವಾಭಿಮಾನಿಗಳಾಗಿ ಬದುಕಿ ಎಂದು ಸಲಹೆ ನೀಡಿದರು.
ಬಂಗಾರಪ್ಪ ಅವರನ್ನು ಆಹ್ವಾನಿಸಲು ಹೋದಾಗ 25 ಲಕ್ಷ ರೂ. ದುಡ್ಡು ಕೊಡಲು ಬಂದರು. ಆಗ ಕುರುಬರು (Kurubas) ಅಷ್ಟು ಬಡವರಿಲ್ಲ ಅಂತ ವಾಪಸ್ ನೀಡಿದೆ. ಹರಿಕೋಡೆ ಅವರು ನಾನು ಊಟ ಹಾಕಿಸುತ್ತೇನೆ ಎಂದಿದ್ದರು. ಅವರಿಗೂ ಬೇಡ ಎಂದೆವು. 5-6 ಲಕ್ಷ ಜನ ಸೇರಿದ ಕಾರ್ಯಕ್ರಮದಲ್ಲಿ ಯಾರಿಗೆ ಮಠ ಇಲ್ವೋ ಅವರಿಗೆಲ್ಲ ಈ ಮಠ ಅಂತ ಘೋಷಣೆ ಮಾಡಿದೆವು ಎಂದು ಹಳೆಯ ನೆನಪು ಹಂಚಿಕೊಂಡರು. ಇದನ್ನೂ ಓದಿ: ಮಲಗಿದ್ದಲ್ಲೇ ಹೃದಯಾಘಾತದಿಂದ ಯೋಧ ಸಾವು – ಹುಟ್ಟೂರಲ್ಲಿ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ
ಮಠಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಮಠಗಳು ಆಗದಿದ್ದರೆ ಶಿಕ್ಷಣ, ಆರೋಗ್ಯ ಸಂಘಟನೆ ಆಗುವುದಿಲ್ಲ. ಸಮಾಜದಲ್ಲಿ ಜಾತಿ ವ್ಯವಸ್ಥೆ ಇದೆ. ಜಾತಿಯನ್ನ ಗುರುತಿಸಬೇಕು, ಜಾತಿಯನ್ನ ನಾಶ ಮಾಡಬೇಕು ಎಂದು ಕುವೆಂಪು ಹೇಳಿದರು. ಎಲ್ಲರ ಸರ್ವೋದಯ ಆಗಬೇಕು ಎಂದು ಮಹಾತ್ಮ ಗಾಂಧೀಜಿ ಕರೆ ನೀಡಿದ್ದರು. ಕುವೆಂಪು ಅವರು ಸಮಪಾಲು, ಸಮಬಾಳು ಆಗ್ಬೇಕು ಎಂದರು. ದೇಶದ ಸಂಪತ್ತು, ಅಧಿಕಾರ ಎಲ್ಲರಿಗೂ ಹಂಚಿಕೆ ಆಗಬೇಕು ಎಂದು ತಿಳಿಸಿದರು.
ಜಾತಿಗೊಂದು ಮಠ ಬೇಡ ಎಂದು ನಾನು ಹೇಳುವುದಿಲ್ಲ. ಜಾತಿ ಎಂಬುದು ವಾಸ್ತವಿಕ, ಮುಂದುವರಿದ ಜಾತಿ (Caste) ಹೆಸರಿನಲ್ಲಿ ಸಮಾವೇಶ ಮಾಡಿದರೆ ಅದು ಜಾತೀಯತೆ ಆಗುತ್ತದೆ. ಹಿಂದುಳಿದ ವರ್ಗದವರು ಜಾತಿ ಸಮಾವೇಶ ಮಾಡಿದರೆ ಅದು ಜಾತೀಯತೆ ಆಗುವುದಿಲ್ಲ. ಎಲ್ಲರೂ ವಿದ್ಯಾವಂತರಾಗಿ, ಸಂಘಟಿತರಾಗಿ ಎಂದು ಅಂಬೇಡ್ಕರ್ ಹೇಳಿದ್ದಾರೆ. ಶೋಷಿತ ವರ್ಗದ ಜನ ಇದನ್ನು ಪಾಲನೆ ಮಾಡಬೇಕು. ಇಲ್ಲವಾದರೆ ಸಮ ಸಮಾಜ ಆಗುವುದು ಕಷ್ಟ. ನಾವು ಕುರುಬರನ್ನೇ ಅಭಿವೃದ್ಧಿ ಪಡಿಸಲು ಈ ಮಠ ಕಟ್ಟಿಲ್ಲ. ಅನ್ಯಾಯವಾಗಿರುವವರಿಗೆ ಈ ಮಠ ಕಟ್ಟಿದ್ದೇವೆ. ಎಲ್ಲರೂ ಮುಖ್ಯ ವಾಹಿನಿಗೆ ಬರಬೇಕು ಆಗ ಮಾತ್ರ ಸಮ ಸಮಾಜ ನಿರ್ಮಾಣ ಆಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಬೇರೆಯವರು ಮಾಡಿರುವ ಮಠ ತಪ್ಪು ಎಂದು ನಾನು ಹೇಳುವುದಿಲ್ಲ. ಸಿದ್ದರಾಮಯ್ಯ ಸಮುದಾಯಕ್ಕೆ ಏನು ಮಾಡಿದ್ದಾನೆ ಎಂದು ಕೆಲವರು ಕೇಳುತ್ತಾರೆ. ಕೇಳುವುದು ಒಳ್ಳೆಯದು ಯಾವತ್ತು ಪ್ರಶ್ನೆ ಮಾಡಿ ಒಪ್ಪಿಕೊಳ್ಳಬೇಕು ಎಂದು ಸಮಾಜಕ್ಕಾಗಿ ನಾನು ಏನೇನು ಮಾಡಿದ್ದೇನೆ ಎಂಬುದನ್ನು ಸಿದ್ದರಾಮಯ್ಯ ಈ ಕಾರ್ಯಕ್ರಮದಲ್ಲಿ ವಿವರಿಸಿದರು.