ವಿಜಯಪುರ: ಜೆಡಿಎಸ್ ಬಿಟ್ಟು ಬೇರೆ ಯಾವ ಪಕ್ಷಕ್ಕೂ ಸೇರುವ ಪ್ರಶ್ನೆಯೇ ಇಲ್ಲ ಎಂದು ನಾಗಠಾಣ ಕ್ಷೇತ್ರದ ಶಾಸಕ ದೇವಾನಂದ್ ಚವ್ಹಾಣ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾನು ನಿರ್ಗತಿಕನಾಗಿದ್ದಾಗ ಸಿಎಂ ಕುಮಾರಸ್ವಾಮಿ ಅವರು ನನಗೆ ಅವಕಾಶ ಕೊಟ್ಟು ಬೆಳೆಸಿದ್ದಾರೆ. ನನ್ನನ್ನು ಮನೆ ಮಗನಂತೆ ನೋಡಿಕೊಳ್ಳುತ್ತಿದ್ದಾರೆ. ನಾನು ಜೆಡಿಎಸ್‍ನ ಕಟ್ಟಾ ಕಾರ್ಯಕರ್ತ, ಪಕ್ಷ ಬಿಡುವ ವಿಚಾರ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
Advertisement
Advertisement
ಬೆಂಗಳೂರಿನಿಂದ ವಿಜಯಪುರಕ್ಕೆ ಇಂದು ಬರುತ್ತಿದ್ದಂತೆ ಎಲ್ಲರೂ ನನಗೆ ಬಿಜೆಪಿ ಸೇರುತ್ತೀರಾ ಅಂತ ಕೇಳಿದರು. ಆಗ ನನಗೆ ಆಶ್ಚರ್ಯವಾಯಿತು. ಸಿಎಂ ಕುಮಾರಸ್ವಾಮಿ, ಪಕ್ಷದ ಮುಖಂಡ ಬಸವರಾಜ ಹೊರಟ್ಟಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ಜೊತೆಗೆ ಸರ್ಕಾರದ ಬಗ್ಗೆ ಚರ್ಚೆ ಮಾಡಿ ಬಂದಿದ್ದೇನೆ. ಸರ್ಕಾರ ಐದು ವರ್ಷಗಳ ಕಾಲ ಅಧಿಕಾರದಲ್ಲಿ ಇರುತ್ತೆ. ಕುಮಾರಸ್ವಾಮಿ ಅವರೇ ಸಿಎಂ ಆಗಿರುತ್ತಾರೆ. ಸಮ್ಮಿಶ್ರ ಸರ್ಕಾರ ಗಟ್ಟಿಯಾಗಿದೆ ಅಂತ ನಾಯಕರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
Advertisement
ನಾನು ಯಾವುದೇ ಬಿಜೆಪಿ ನಾಯಕರ ಜೊತೆಗೆ ಮಾತನಾಡಿಲ್ಲ. ನಮ್ಮ ಸಮಾಜದ ಕೆಲ ಮುಖಂಡರು ಬಿಜೆಪಿಗೆ ಸೇರುವ ಬಗ್ಗೆ ಮಾತಾಡಿದ್ದಾರೆ. ಆದರೆ ನಾನು ನಯವಾಗಿ ತಿರಸ್ಕರಿಸಿದ್ದೇನೆ. ವಿಜಯಪುರ ಲೋಕಸಭಾ ಅಭ್ಯರ್ಥಿ, ಪತ್ನಿ ಸುನಿತಾ ಚೌಹನ್ ಅವರ ಸೋಲಿಗೆ ಯಾರೂ ಹೊಣೆಯಲ್ಲ. ಜನಾಭಿಪ್ರಾಯ ಹೇಗಿದೆಯೋ ಹಾಗೆ ಆಗಿದೆ. ಯಾರನ್ನೂ ದೂಷಿಸುವುದು ಸರಿಯಲ್ಲ ಎಂದರು.