ಬೆಳಗಾವಿ: ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಕ್ಕೆ ಕಾಂಗ್ರೆಸ್‍ನಲ್ಲಿ ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಎಲ್ಲ ಬೆಳವಣಿಗೆ ನಡುವೆ ಉತ್ತರ ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ ಸಹ ಪಕ್ಷದ ಹೈಕಮಾಂಡ್ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಯಾರು, ಹೇಗೆ ನಿರ್ಧಾರ ಕೈಗೊಳ್ಳುತ್ತಾರೆ. ನಿರ್ಧಾರವನ್ನು ಮತ್ತೆ ಯಾರು ಮುರಿಯುತ್ತಾರೆ ಎನ್ನುವುದೇ ತಿಳಿಯದಾಗಿದೆ. 20 ವರ್ಷ ಪಕ್ಷಕ್ಕಾಗಿ ದುಡಿಯುತ್ತಿರುವೆ. ಆದರೂ ಪಕ್ಷದ ಮಾನದಂಡ ನನಗೆ ತಿಳಿಯದಾಗಿದೆ. ಕಾಣುವ ಮತ್ತು ಕಾಣದ ಕೈಗಳು ಕೆಲಸ ಮಾಡಿ ನನಗೆ ಸಚಿವ ಸ್ಥಾನ ತಪ್ಪಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡುವುದಿಲ್ಲವೆಂದು ಹೈಕಮಾಂಡ್ ನಿರ್ಧಾರ ಕೈಗೊಂಡಿತ್ತು. ಹೀಗಾಗಿ ಹಿರಿಯ ನಾಯಕಿ ಮೋಟಮ್ಮ ಅವರಿಗೆ ಸ್ಥಾನ ತಪ್ಪಿತ್ತು. ಆದರೆ ಏಕಾಏಕಿ ಜಯಮಾಲಾ ಅವರಿಗೆ ಸಚಿವ ಸ್ಥಾನ ನೀಡಿರುವುದು ಅಚ್ಚರಿ ತಂದಿದೆ. ಕಬ್ಬಿಣದ ಕಡಲೆಯಾಗಿದ್ದ ಬೆಳಗಾವಿಯಲ್ಲಿ ಗೆಲುವು ಸಾಧಿಸಿದ್ದೇನೆ. ಅದರೂ, ನನ್ನ ಗೆಲುವು ಪರಿಗಣಿಸದೇ ಸಚಿವ ಸ್ಥಾನ ನೀಡದಿರುವುದಕ್ಕೆ ನೋವುಂಟಾಗಿದೆ. ನನಗೆ ಅಗಿರುವ ಅನ್ಯಾಯದ ವಿರುದ್ಧ ಪಕ್ಷದ ಸಭೆಯಲ್ಲಿ ಪ್ರಶ್ನಿಸುವುದಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿಸಿದರು.