ಧರ್ಮಸ್ಥಳ: ನಾನು ನಾಮಪತ್ರ ವಾಪಸ್ ಪಡೆಯಲು ದುಡ್ಡು ತೆಗೆದುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಲು ಧರ್ಮಸ್ಥಳಕ್ಕೆ ಬಂದಿದ್ದೇನೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ ಅವರು ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಲೋಕಸಭಾ ಚುನಾವಣೆಯಲ್ಲಿ ನಾಮಪತ್ರ ವಾಪಸ್ ಪಡೆಯಲು ಮತ್ತು ಚುನಾವಣಾ ಪ್ರಚಾರಕ್ಕೆ ಹೋಗಲು ನಯಾ ಪೈಸೆ ಹಣವನ್ನು ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕಳೆದ ಐದು ವರ್ಷಗಳಲ್ಲಿ ಪ್ರಾಮಾಣಿಕವಾಗಿ ನಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಲೋಕಸಭೆಯಲ್ಲಿ ರೈತರ ಪರವಾಗಿ ಧ್ವನಿ ಎತ್ತಿದ್ದೇನೆ. ಈ ಬಾರಿ ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಮೈತ್ರಿ ಕಾರಣಕ್ಕೆ ಸೀಟು ಕೈ ತಪ್ಪಿತು. ಮೈತ್ರಿ ಅನಿವಾರ್ಯತೆಯ ಹಿನ್ನೆಲೆಯಲ್ಲಿ ಸೀಟು ತ್ಯಾಗ ಮಾಡುವ ಬಗ್ಗೆ ನಮ್ಮ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ ಕಾರಣ ನಾನು ನಾಮಪತ್ರ ವಾಪಸ್ ಪಡೆದೆ. ಅದನ್ನು ಬಿಟ್ಟರೆ ಹಣದ ಆಮಿಷಕ್ಕೆ ಒಳಗಾಗಿ ನಾನು ಯಾವ ಕೆಲಸವನ್ನು ಮಾಡಿಲ್ಲ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯ ಬಳಿಕ ಯಾರೋ ಅಪ್ರಬುದ್ಧ ವ್ಯಕ್ತಿಗಳಿಬ್ಬರು ಮಾತನಾಡಿದ ಆಡಿಯೋ ಬಂದಿತ್ತು. ನನ್ನ ರಾಜಕೀಯ ಬೆಳವಣಿಗೆ ಸಹಿಸದ ವಿಕೃತ ಮನಸ್ಸಿನವರು ಈ ಕೃತ್ಯ ಮಾಡಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ವ್ಯಕ್ತಿಗಳು ಯಾರು ಕೂಡ ಸ್ಪಷ್ಟನೆ ನೀಡಿಲ್ಲ. ನಾಮಪತ್ರ ಹಿಂಪಡೆಯುವುದಕ್ಕಾಗಲಿ, ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಯಾ ಪೈಸೆ ಪಡೆದಿಲ್ಲ. ನ್ಯಾಯಾಂಗದ ಹಿನ್ನೆಲೆಯಲ್ಲಿ ಬಂದಿರುವ ನನ್ನ ಚಾರಿತ್ರ್ಯ ಹರಣ ಮಾಡಲು ಪ್ರಯತ್ನಿಸಿದ್ದಾರೆ. ಹೀಗಾಗಿ ಕೋಟ್ಯಂತರ ಜನರು ನಂಬುವ ಧರ್ಮಸ್ಥಳ ಕ್ಷೇತ್ರದಲ್ಲಿ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ತಿಳಿಸಿದರು.
ನನ್ನ ರಾಜಕೀಯ ಜೀವನದಲ್ಲಿ ಇಂತಹ ಘಟನೆ ಬಂದಿರುವುದು ತುಂಬ ನೋವಾಗಿದೆ. ಇದನ್ನೆಲ್ಲ ಹಂಚಿಕೊಳ್ಳಲು ದೇವರ ಸನ್ನಿಧಿಗೆ ಬಂದಿದ್ದೇನೆ. ನಾನು ಪ್ರಮಾಣಿಕವಾಗಿ ಇದ್ದೇನೆ ಎಂದು ಹೇಳಿಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.