ತನ್ನ ಪತ್ನಿಯ ಜೊತೆ ಕಿರುತೆರೆಯ ಖ್ಯಾತ ನಟ ಕರಣ್ ಮೆಹ್ರಾಗೆ (Karan Mehra) ಅನೈತಿಕ ಸಂಬಂಧವಿದೆ ಎಂದು ಸುಸ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ಆರೋಪ ಮಾಡಿದ್ದರು. ತಮ್ಮ ಪತ್ನಿ ಚಾರು(Charu) ಮತ್ತು ಕರಣ್ ಮೆಹ್ರಾ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಕರಣ್ ಪ್ರತಿಕ್ರಿಯೆ ನೀಡಿದ್ದಾರೆ. ‘ನನಗೂ ಚಾರುಗೂ ಯಾವುದೇ ಸಂಬಂಧವಿಲ್ಲ. ಹತ್ತು ವರ್ಷಗಳಿಂದ ಅವರನ್ನು ನಾನು ಭೇಟಿ ಕೂಡ ಆಗಿರಲಿಲ್ಲ. ಜೂನ್ ನಲ್ಲಿ ಪ್ರಚಾರದ ವೇಳೆ ಕೆಲವೇ ನಿಮಿಷಗಳ ಭೇಟಿ ಆಗಿತ್ತು ಅಷ್ಟೆ. ಆದರೆ, ಅವರು ಯಾವ ಸಂಬಂಧದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ’ ಎಂದಿದ್ದಾರೆ. ಅಲ್ಲದೇ ರಾಜೀವ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.
ರಾಜೀವ್ (Rajeev Sen) ಮತ್ತು ಚಾರು ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ದಾಂಪತ್ಯ ಕಲಹ ಬೀದಿಗೂ ಬಿದ್ದಿದೆ. ರಾಜೀವ್ ಜೊತೆಗಿನ ಸಂಬಂಧವನ್ನು ಮುರಿದುಕೊಳ್ಳುವುದಕ್ಕಾಗಿ ಚಾರು ವಿಚ್ಚೇದನಕ್ಕೆ ಮುಂದಾಗಿದ್ದಾರೆ. ಹೀಗಾಗಿ ರಾಜೀವ್ ಪತ್ನಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪತಿ ಚಾರುಗೆ ಟಿವಿ ನಟ ಕರಣ್ ಮೆಹ್ರಾ ಎನ್ನುವವರ ಜೊತೆ ಸಂಬಂಧ ಇರುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಚಾರು ತಾಯಿಯೇ ತಮಗೆ ತಿಳಿಸಿರುವುದಾಗಿ ಹೇಳಿದ್ದಾರೆ. ಅವಳಿಂದಾಗಿ ನನಗೆ ಮೋಸವಾಗಿದೆ ಎನ್ನುವ ಆರೋಪ ಕೂಡ ರಾಜೀವ್ ಅವರದ್ದು. ಇದನ್ನೂ ಓದಿ:ಶೂಟಿಂಗ್ಗೆ ಬ್ರೇಕ್, ತಾಂಜಾನಿಯಾ ಕಾಡಿನಲ್ಲಿ ಪತ್ನಿ ಜೊತೆ ರಾಮ್ಚರಣ್
ಚಾರು ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ತಾನು ಗರ್ಭಿಣಿ ಆಗಿದ್ದಾಗ ರಾಜೀವ್ ಮೋಸ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಈ ಕಾರಣಕ್ಕಾಗಿಯೇ ಪತಿಯಿಂದ ತಾವು ಪ್ರತ್ಯೇಕವಾಗಿ ವಾಸಿಸುತ್ತಿರುವ ವಿಚಾರವನ್ನೂ ತಿಳಿಸಿದ್ದಾರೆ. ದಾಂಪತ್ಯದಲ್ಲಿ ನನಗೆ ದ್ರೋಹ ಮಾಡಿದ್ದನ್ನು ಕ್ಷಮಿಸುವುದಿಲ್ಲ ಎಂದು ಚಾರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಇಬ್ಬರ ಜಗಳ ಈಗಾಗಲೇ ಬೀದಿರಂಪ ಆಗಿದೆ. ಆರೋಪ ಪ್ರತ್ಯಾರೋಪ ಇಬ್ಬರ ಜೀವನವನ್ನು ಯಾವ ಕಡೆ ತಗೆದುಕೊಂಡು ಹೋಗುತ್ತದೆಯೋ ಕಾದು ನೋಡಬೇಕು.