ಲಕ್ನೋ: ಮದ್ಯವ್ಯಸನಿ ಅಧಿಕಾರಿಗಿಂತ ರಿಕ್ಷಾ ಎಳೆಯುವವನು ಅಥವಾ ಕಾರ್ಮಿಕ ಉತ್ತಮ ವರನಾಗಬಹುದು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ, ಉತ್ತರ ಪ್ರದೇಶದ ಸುಲ್ತಾನ್‌ಪುರ ಕ್ಷೇತ್ರದ ಬಿಜೆಪಿ ಸಂಸದ ಕೌಶಲ್ ಕಿಶೋರ್(Kaushal Kishore) ಹೇಳಿದ್ದಾರೆ.
ತಮ್ಮ ಕ್ಷೇತ್ರದಲ್ಲಿ ಆಯೋಜನೆಗೊಂಡಿದ್ದ ಮದ್ಯ ವರ್ಜನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೆಣ್ಣುಮಕ್ಕಳನ್ನು ಮದ್ಯವ್ಯಸನಿಗಳಿಗೆ(Alcoholics) ಮದುವೆ ಮಾಡಿಕೊಡಬೇಡಿ ಎಂದು ಪೋಷಕರಲ್ಲಿ ಮನವಿ ಮಾಡಿದರು. ಮದ್ಯವ್ಯಸನಿಗಳ ಜೀವಿತಾವಧಿ ತುಂಬಾ ಕಡಿಮೆ ಎಂದು ಹೇಳಿ ತಮ್ಮ ಮಗನ ಕಥೆಯನ್ನು ವಿವರಿಸಿ ತಮಗಾದ ನೋವನ್ನು ತೋಡಿಕೊಂಡರು.
Advertisement
ನಾನು ಸಂಸದನಾಗಿಯೂ, ನನ್ನ ಪತ್ನಿ ಶಾಸಕಿಯಾಗಿದ್ದರೂ ನಮಗೆ ನಮ್ಮ ಮಗನ ಜೀವ ಉಳಿಸಲು ಸಾಧ್ಯವಾಗದೇ ಇರುವಾಗ ಸಾಮಾನ್ಯ ಜನರಿಗೆ ಸಾಧ್ಯವೇ ಎಂದು ಪ್ರಶ್ನಿಸಿದರು.
Advertisement
Advertisement
ನನ್ನ ಮಗ ಆಕಾಶ್ ಸ್ನೇಹಿತರೊಂದಿಗೆ ಮದ್ಯ ಸೇವಿಸುವ ಅಭ್ಯಾಸವನ್ನು ಬೆಳೆಸಿದ್ದ. ಈ ವಿಚಾರ ತಿಳಿದು ಆತನನ್ನು ಮದ್ಯ ವರ್ಜನ ಶಿಬಿರಕ್ಕೆ ಸೇರಿಸಲಾಯಿತು. ಅವನು ಕೆಟ್ಟ ಚಟವನ್ನು ಬಿಟ್ಟಿರಬಹುದು ಎಂದು ಭಾವಿಸಿ ಆರು ತಿಂಗಳ ಬಳಿಕ ಮದುವೆ ಮಾಡಿಸಿದ್ದೆವು. ಆದರೆ ಅವನು ಮತ್ತೆ ಕುಡಿಯಲು ಪ್ರಾರಂಭಿಸಿದ್ದ. ಅಂತಿಮವಾಗಿ ಅವನ ಸಾವಿಗೆ ಮದ್ಯವೇ ಕಾರಣವಾಯಿತು. ಎರಡು ವರ್ಷಗಳ ಹಿಂದೆ ಅಕ್ಟೋಬರ್ 19 ರಂದು ಆಕಾಶ್ ಮೃತಪಟ್ಟಾಗ ಆತನ ಮಗನಿಗೆ ಕೇವಲ ಎರಡು ವರ್ಷ ವಯಸ್ಸಾಗಿತ್ತು ಎಂದು ತಮ್ಮ ನೋವಿನ ಕಥೆಯನ್ನು ವಿವರಿಸಿದರು. ಇದನ್ನೂ ಓದಿ: 2022ರಲ್ಲಿ ದಾಖಲೆಯ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲು
Advertisement
ನನ್ನ ಮಗನನ್ನು ಉಳಿಸಲು ನನಗೆ ಸಾಧ್ಯವಾಗಲಿಲ್ಲ. ಮಗ ಮೃತಪಟ್ಟಿದ್ದರಿಂದ ಹೆಂಡತಿ ವಿಧವೆಯಾದಳು. ಈ ಕಾರಣಕ್ಕೆ ಹೆಣ್ಣುಮಕ್ಕಳನ್ನು ಮತ್ತು ಸಹೋದರಿಯರನ್ನು ನೀವು ರಕ್ಷಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.
ಸ್ವಾತಂತ್ರ್ಯ ಚಳವಳಿಯ 90 ವರ್ಷಗಳ ಅವಧಿಯಲ್ಲಿ 6.32 ಲಕ್ಷ ಜನರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಆದರೆ ವ್ಯಸನದಿಂದಾಗಿ ಪ್ರತಿ ವರ್ಷ ದೇಶದಲ್ಲಿ ಸುಮಾರು 20 ಲಕ್ಷ ಜನರು ಸಾಯುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರವನ್ನು ತಿಳಿಸಿದರು.
ಜಿಲ್ಲೆಯನ್ನು ವ್ಯಸನಮುಕ್ತಗೊಳಿಸಲು ಎಲ್ಲಾ ಶಾಲೆಗಳಿಗೆ ವ್ಯಸನಮುಕ್ತ ಅಭಿಯಾನವನ್ನು ಕೊಂಡೊಯ್ಯಬೇಕು ಮತ್ತು ಬೆಳಗ್ಗಿನ ಪ್ರಾರ್ಥನೆಯ ಸಮಯದಲ್ಲಿ ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಸಚಿವರು ಹೇಳಿದರು.