‘ಕೈ’ ಶಾಸಕರು, ನಾಯಕರ ಬೆಂಬಲ ಇಲ್ಲದಿದ್ರೂ ಜನಾಶೀರ್ವಾದಿಂದ ಗೆಲ್ತೇನೆ: ಮುನಿಯಪ್ಪ

Public TV
3 Min Read
RMG CONGRESS

– 7 ಬಾರಿ ಗೆದ್ದ ನನಗೆ 8ನೇ ಬಾರಿ ಹೇಗೆ ಗೆಲ್ಲೋದು ಎಂದು ಗೊತ್ತಿದೆ
– ಕೋಮುವಾದಿಗಳಿಂದ ದೇಶ ಕಾಪಾಡಿ

ರಾಮನಗರ: ಕೋಲಾರದಲ್ಲಿ ಏಳು ಬಾರಿ ಸಂಸದರಾಗಿ ಗೆದ್ದಿರುವ ನನಗೆ 8ನೇ ಬಾರಿ ಹೇಗೆ ಗೆಲ್ಲಬೇಕು ಎನ್ನುವುದು ಗೊತ್ತಿದೆ. ಕಾಂಗ್ರೆಸ್‍ನ ಶಾಸಕರು ಮತ್ತು ನಾಯಕರ ಬೆಂಬಲ ಇಲ್ಲದಿದ್ದರೂ ಜನರ ಆಶೀರ್ವಾದದಿಂದ ಗೆಲುವು ಸಾಧಿಸುತ್ತೇನೆ ಎಂದು ತಮ್ಮ ವಿರುದ್ಧ ತೊಡೆ ತಟ್ಟಿರುವ ಸ್ವಪಕ್ಷೀಯ ನಾಯಕರ ವಿರುದ್ಧ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಟಾಂಗ್ ನೀಡಿದ್ದಾರೆ.

kolar MP KH Muniyappa

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೋಲಾರದಲ್ಲಿ ತಮ್ಮ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದು ಮುನಿಯಪ್ಪ ಈ ಬಾರಿ ಸೋಲುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಯಡಿಯೂರಪ್ಪನವರು ಹಿರಿಯ ರಾಜಕಾರಣಿಗಳು, ವ್ಯಕ್ತಿಗತವಾಗಿ ಅವರ ಬಗ್ಗೆ ಅಪಾರ ಗೌರವವಿದೆ. ರಾಜಕೀಯದಲ್ಲಿ ಅವರ ಅಭ್ಯರ್ಥಿ ಕಣದಲ್ಲಿದ್ದಾಗ ಎದುರಾಳಿ ಅಭ್ಯರ್ಥಿ ಸೋಲ್ತಾರೆ ಎಂದು ಹೇಳುತ್ತಾರೆ. ಅವರ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದಾರೆ. ಆದರೆ ಏಳು ಬಾರಿ ಗೆದ್ದಿರುವ ನನಗೆ ಎಂಟನೇ ಬಾರಿ ಹೇಗೆ ಗೆಲ್ಲಬೇಕು ಎಂಬುದು ಗೊತ್ತಿದೆ ಎಂದು ತಿಳಿಸಿದರು.

ನಾನು ನಂಬಿರುವ, ನನ್ನನ್ನು ನಂಬಿರುವ ಜನರು ನನ್ನೊಂದಿಗೆ ಇದ್ದಾರೆ. ನಾಯಕರಿಗಿಂತ ಕಾರ್ಯಕರ್ತರು ಮತ್ತು ಮತದಾರರು ಜೊತೆಯಲ್ಲಿ ಇದ್ದಾರೆ. ಅದೇ ನನ್ನ ಗೆಲುವಿಗೆ ಶ್ರೀರಕ್ಷೆ. ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ವಿರುದ್ಧ ಹಲವು ವರ್ಷಗಳಿಂದ ರಾಜಕೀಯ ಪಿತೂರಿಗಳು ನಡೆಯುತ್ತಿವೆ. ಪ್ರತಿ ಚುನಾವಣೆಗಳಲ್ಲಿ ನಾನೇ ಮುಂದೆ ನಿಂತು ಗೆಲ್ಲಿಸಿದ ಮೂರು ನಾಲ್ಕು ಮಂದಿ ಶಾಸಕರು ನನ್ನನ್ನು ವಿರೋಧ ಮಾಡುತ್ತಿದ್ದಾರೆ. ಈಗ ಮುಳಬಾಗಿಲಿನ ಮಾಜಿ ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನನಗೆ ಯಾರ ಬೆಂಬಲವೂ ಬೇಕಿಲ್ಲ. ಯಾರು ಬೆಂಬಲ ಮಾಡದಿದ್ದರೂ ನನ್ನೊಂದಿಗೆ ಜನರು ಇದ್ದಾರೆ ಎಂದು ತಿಳಿಸಿದರು.

MYS Modi

ನಾನು ಕೋಲಾರದಲ್ಲಿ ಮಾಡಿರುವ ಅಭಿವೃದ್ಧಿ ಬಗ್ಗೆ ಜನರಿಗೆ ಗೊತ್ತಿದೆ. ಪ್ರಧಾನಿ ಮೋದಿಯವರು ಈವರೆಗೆ ಯಾರಿಗೂ ಕೆಲಸ ಕೊಡಲಿಲ್ಲ. ಆದರೆ, ನಾನು ನನ್ನ ಕ್ಷೇತ್ರದ 50 ಸಾವಿರ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದೇನೆ. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಒಕ್ಕಲಿಗ ಸಮುದಾಯಕ್ಕೆ ತಾನು ಬೈದಿರುವೆ ಎನ್ನಲಾಗುವ 10 ಆಡಿಯೋ ಬಿಡುಗಡೆ ಮಾಡಲಿ, ಅದಕ್ಕೆ ಅವಕಾಶವಿದೆ. ನನಗೆ ಕ್ಷೇತ್ರದಲ್ಲಿ ಒಕ್ಕಲಿಗರೇ ಬೆನ್ನೆಲುಬಾಗಿದ್ದಾರೆ. ಒಕ್ಕಲಿಗರೇ ಮೊದಲಿಗರು, ನಂತರ ಬೇರೆಯವರು ಎಂದರು.

ಕೋಮುವಾದಿ ಶಕ್ತಿಗಳಿಂದ ದೇಶವನ್ನು ಕಾಪಾಡಿ ಶಾಂತಿ ನೆಮ್ಮದಿಯಿಂದ ಪ್ರಗತಿಯತ್ತ ಕೊಂಡೊಯ್ಯಲು ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಎಸ್‍ಸಿ/ಎಸ್‍ಟಿ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಸಭೆ ನಡೆಸಿ ಮನವಿ ಮಾಡಿದರು. ಬಿಜೆಪಿಯಿಂದ ದೇಶಕ್ಕೆ ಗಂಡಾಂತರ ಬಂದಿದೆ. ಕೋಮುವಾದಿ ಶಕ್ತಿಗಳಿಂದ ಒಬ್ಬ ವ್ಯಕ್ತಿಯಲ್ಲ ದೇಶವನ್ನು ಉಳಿಸಬೇಕಾಗಿದೆ. ಅನ್ನದಾತರು, ಬಡವರು ಹಾಗೂ ಎಲ್ಲಾ ಜಾತಿ ಧರ್ಮಗಳ ಜನರ ರಕ್ಷಣೆ ಮಾಡಬೇಕಾಗಿದೆ. ಈ ಕಾರಣಕ್ಕಾಗಿ ಮೈತ್ರಿ ಅಭ್ಯರ್ಥಿಗಳನ್ನು ಆಶೀರ್ವಾದ ಮಾಡುವಂತೆ ತಿಳಿಸಿದರು.

Narendra Modi BJP A

ದೇಶದ ಭಾವೈಕ್ಯತೆ, ಒಗ್ಗಟ್ಟು, ಧರ್ಮಗಳ ಸಹಿಷ್ಣುತೆಗೆ ಪ್ರಧಾನಿ ಮೋದಿ ಅವರು ಧಕ್ಕೆ ತಂದಿದ್ದಾರೆ. ರಾಷ್ಟ್ರ ಪ್ರಗತಿ ಹೊಂದಲು ಶಾಂತಿ ಇರಬೇಕು. ಶಾಂತಿ ಜತೆಗೆ ಒಗ್ಗಟ್ಟು ಇರಬೇಕು. ಈ ವಿಚಾರದಲ್ಲಿ ಮನಮೋಹನ್ ಸಿಂಗ್ ಉತ್ತಮವಾಗಿ ಕೆಲಸ ಮಾಡಿದರು. ಕೋಮುವಾದಿ ಶಕ್ತಿಗಳಿಂದ ಶಾಂತಿ ಭಂಗವಾಗಿದ್ದು, ಸಂವಿಧಾನ ಬದಲಾವಣೆ ಪಿತೂರಿಯು ನಡೆಯುತ್ತಿದೆ ಎಂದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಅಂಬೇಡ್ಕರ್ ಪ್ರತಿಮೆ ತೆರವುಗೊಳಿಸುವುದಾಗಿ ಹೇಳುತ್ತಾನೆ. ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಸಂವಿಧಾನ ಬದಲಾವಣೆಯ ಮಾತುಗಳನ್ನಾಡುತ್ತಾರೆ. ಇಂತಹ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಮತದಾರರು ಎಚ್ಚರಿಕೆಯಿಂದ ಮತ ಚಲಾಯಿಸಬೇಕು. ದೇಶದ ಅಳಿವು ಉಳಿವು ಜನರ ಕೈಯಲ್ಲಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *