ನವದೆಹಲಿ: ಭಾರತಕ್ಕೆ ಬಂದರೆ ನನ್ನ ಕಕ್ಷಿದಾರರ ಜೀವಕ್ಕೆ ಅಪಾಯವಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ ವಕೀಲರು ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದಾರೆ.
ಒಂದು ವೇಳೆ ನಾನು ಭಾರತಕ್ಕೆ ಬಂದರೆ ಜೀವಕ್ಕೆ ಅಪಾಯವಿದೆ. ಕೊಲೆ ಬೆದರಿಕೆ ಕೇಳಿಬಂದಿದೆ. ಇದರಿಂದಾಗಿ ನಾನು ಭಾರತಕ್ಕೆ ಬರುವುದಿಲ್ಲ ಅಂತಾ ನೀರವ್ ಮೋದಿ ತಿಳಿಸಿದ್ದಾರೆ ಎಂದು ವಕೀಲ ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಇದನ್ನು ಓದಿ: ನೀರವ್ ಮೋದಿಯ ಹಾಂಗ್ಕಾಂಗ್ನ 255 ಕೋಟಿ ರೂ. ಆಸ್ತಿ ಇಡಿ ವಶಕ್ಕೆ
ಇಡಿ ಅಧಿಕಾರಿಗಳು ನೀರವ್ ಕಂಪನಿ, ಆಸ್ತಿಯನ್ನು ವಶಕ್ಕೆ ಪಡೆದಿದ್ದರಿಂದ ಸಿಬ್ಬಂದಿಗೆ ವೇತನ ನೀಡಿಲ್ಲ. ಅಷ್ಟೇ ಅಲ್ಲದೇ ನೀರವ್ ಬಾಡಿಗೆ ಪಡೆದಿದ್ದ ಜಾಗದ ಮಾಲೀಕರಿಗೆ ಹಣ ಪಾವತಿಸಿಲ್ಲ, ವಜ್ರಾಭರಣಕ್ಕಾಗಿ ಮುಂಗಡ ಹಣ ನೀಡಿದ್ದವರು ತಮ್ಮ ಹಣವನ್ನು ಮರಳಿಸುವಂತೆ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಪ್ರಾಣ ಬೆದರಿಕೆ ಇರುವ ಕಾರಣ ನೀರವ್ ಮೋದಿ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ವಕೀಲರು ಹೇಳಿದ್ದಾರೆ. ಇದನ್ನು ಓದಿ: ನೀರವ್ ಮೋದಿಗೆ ಇಡಿ ಶಾಕ್- 637 ಕೋಟಿ ರೂ. ಆಸ್ತಿ ಮುಟ್ಟುಗೋಲು
ಏನಿದು ಪ್ರಕರಣ?:
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿ ವಿದೇಶಕ್ಕೆ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಪರಾರಿಯಾಗಿದ್ದಾರೆ. ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ನೀಡಿದರೂ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ ಪೋಲ್‍ಗೆ ಮನವಿ ಮಾಡಿಕೊಂಡಿತ್ತು. ಈಗಾಗಲೇ ಮುಂಬೈ ಸೇರಿದಂತೆ ವಿದೇಶದಲ್ಲಿರುವ ನೀರವ್ ಮೋದಿ ಆಸ್ತಿಯನ್ನು ಜಾರಿ ನಿರ್ದೇಶನಾಲಯಕ್ಕೆ ವಶಕ್ಕೆ ಪಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv