ಮುಂಬೈ: ನಾನು ಒಬ್ಬನೇ ಬಂದಿದ್ದೇನೆ ಒಬ್ಬನೇ ಸಾಯುತ್ತೇನೆ. ಬಿಜೆಪಿ ಅವರು ಲಕ್ಷ ಲಕ್ಷ ಘೋಷಣೆ ಕೂಗಿದರೂ ನಾನು ಹೆದರಲ್ಲ ಎಂದು ಸಚಿವ ಡಿಕೆ ಶಿವಕುಮಾರ್ ಪಟ್ಟು ಹಿಡಿದು ಕೂತಿದ್ದಾರೆ.
ಅತೃಪ್ತ ಶಾಸಕರನ್ನು ಭೇಟಿ ಮಾಡಲು ಮುಂಬೈಗೆ ತೆರಳಿರುವ ಡಿಕೆಶಿಯನ್ನು ಪೊಲೀಸರು ಹೋಟೆಲ್ ಒಳಗೆ ಬಿಡಲು ನಿರಾಕರಿಸಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೋಟೆಲ್ ಒಳಗೆ ಬಿಡಲ್ಲ ಅಂದರೆ ಹೇಗೆ? ಇದು ಭಾರತ. ಪೊಲೀಸರ ಜೊತೆಗೇನೆ ಹೋಟೆಲ್ ಒಳಗೆ ಕಳುಹಿಸಿ. ಪೊಲೀಸರು ಸರ್ಕಾರದ ಆದೇಶದಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ ನನಗೆ ಒಳಗೆ ಬಿಡದಿದ್ದರೆ ಏನು, ಒಳಗಿರುವ ಶಾಸಕರೇ 5 ನಿಮಿಷದಲ್ಲಿ ನನಗೆ ಫೋನ್ ಮಾಡುತ್ತಾರೆ. ನಮ್ಮ ಶಾಸಕರನ್ನು ಭೇಟಿ ಮಾಡದೇ ನಾನು ಹೋಗಲ್ಲ ಎಂದು ದೃಢ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಮುಂಬೈ ಹೋಟೆಲ್ ನಲ್ಲಿ 10 ಮಂದಿ ಅತೃಪ್ತ ಶಾಸಕರು ವಾಸ್ತವ್ಯ ಹೂಡಿದ್ದು, ರಾಜೀನಾಮೆ ಅಂಗೀಕರವಾಗುವವರೆಗೆ ಬೆಂಗಳೂರಿಗೆ ವಾಪಸ್ ಬರಲ್ಲ ಎಂದು ಖಡಕ್ ಆಗಿ ಎಚ್ಚರಿಕೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಚಿವ ಡಿಕೆ ಶಿವಕುಮಾರ್, ಶಾಸಕ ಶಿವಲಿಂಗೇಗೌಡ ಹಾಗೂ ಸಚಿವ ಜಿ.ಟಿ ದೇವೇಗೌಡ ಅವರು ಮುಂಬೈಗೆ ತೆರಳಿದ್ದರು. ಆದರೆ ಇದೀಗ ಅವರನ್ನು ಹೋಟೆಲ್ ಒಳಗಡೆ ಬಿಡಲು ಅಲ್ಲಿನ ಪೊಲೀಸರು ನಿರಾಕರಿಸುತ್ತಿದ್ದು, ಭಾರೀ ಹೈಡ್ರಾಮವೇ ನಡೆಯುತ್ತಿದೆ.
ಇಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.