ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ತಲೆ ಬಾಗುತ್ತೇನೆ – ನಿಖಿಲ್ ಕುಮಾರಸ್ವಾಮಿ

Public TV
2 Min Read
Nikhil Kumaraswamy 4

ರಾಮನಗರ: ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ನಾನು ತಲೆ ಬಾಗುತ್ತೇನೆ ಎಂದು ಎನ್‌ಡಿಎ ಅಭ್ಯರ್ಥಿ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು.

ಚುನಾವಣೆ ಫಲಿತಾಂಶದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ನಾನು ತಲೆಬಾಗುತ್ತೇನೆ. ಚುನಾವಣಾ ಸಂದರ್ಭದಲ್ಲಿ ನಾನು ಕೆಲವು ಮಾತು ಕೊಟ್ಟಿದ್ದೆ ಆ ಮಾತನ್ನ ಚುನಾವಣೆಯ ಸೋಲು-ಗೆಲುವು ನಿರ್ಧಾರ ಮಾಡಲ್ಲ. ನಿಮ್ಮ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮಾತಿನಿಂದ ಹಿಂದೆ ಸರಿಯಲ್ಲ. ನಾನು ಈ ಜಿಲ್ಲೆಯ ಮಗ ಎಂದು ಭಾವಿಸುತ್ತೇನೆ. ನಾನು ಇಲ್ಲಿ ಹುಟ್ಟದೆ ಇರಬಹುದು ಆದರೆ ಭಾವನಾತ್ಮಕವಾಗಿ ಸಂಬಂಧ ಇದೆ ಎಂದು ಹೇಳಿದರು.ಇದನ್ನೂ ಓದಿ: ಪತಿಯೊಂದಿಗೆ ಯುಕೆಯಲ್ಲಿ ವಾಸಿಸುತ್ತಿದ್ದ ಭಾರತದ ಮಹಿಳೆ ಕಾರಿನಲ್ಲಿ ಶವವಾಗಿ ಪತ್ತೆ


ರಾಜ್ಯದಲ್ಲಿ 3 ಕ್ಷೇತ್ರದ ಉಪಚುನಾವಣೆಗಳಲ್ಲಿ (ByElection) ಚನ್ನಪಟ್ಟಣ (Channapatna) ಬಹುನಿರೀಕ್ಷೆಯ ಚುನಾವಣೆ ಆಗಿತ್ತು. ಉಪಚುನಾವಣೆಯಲ್ಲಿ ಕೊನೆಹಂತದ ತೀರ್ಮಾನಕ್ಕೆ ಪಕ್ಷದ ಶಿಸ್ತಿನ ಸಿಪಾಯಿ ಆಗಿ ನಾನು ಎನ್‌ಡಿಎ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಿದೆ. ಚುನಾವಣೆಯ ಫಲಿತಾಂಶ ಎಲ್ಲರಿಗೂ ಆಘಾತ ತಂದುಕೊಟ್ಟಿದೆ. ಕೊನೆಯ ಹಂತದ ಬೆಳವಣಿಗೆಯಲ್ಲಿ ಕಳೆದ 18 ದಿನದಲ್ಲಿ ಪ್ರತಿ ಹಳ್ಳಿಯಲ್ಲೂ ಎಲ್ಲರೂ ನನಗೆ ಪ್ರೀತಿ, ವಾತ್ಸಲ್ಯ ತೋರಿದ್ದಾರೆ. ಸುಮಾರು 87 ಸಾವಿರ ಮತ ಬಂದಿದೆ. ಪ್ರಜಾಪ್ರಭುತ್ವದಲ್ಲಿ ತೀರ್ಮಾನ, ತೀರ್ಪು ತೆಗೆದುಕೊಳ್ಳುವ ಹಕ್ಕು ಇರುವುದು ಜನರಿಗೆ, ಮತದಾರರಿಗೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ತಿಳಿಸಿದರು.

ಎಲ್ಲರೂ ಬಹಳ ಪ್ರಾಮಾಣಿಕವಾಗಿ ದುಡಿದಿದ್ದಾರೆ. ಆದರೆ ಚುನಾವಣೆ ಸೋಲಿಗೆ ಕೆಲವು ಕಾರಣ ಇರುತ್ತದೆ. ಒಂದು ಸಮುದಾಯದ ಮತ ಒಂದು ಕಡೆ ಕ್ರೋಢಿಕರಿಸಿದ್ದು ಕಾರಣ ಆಗಿರಬಹುದು. ನಮ್ಮ ಪಕ್ಷ ಸಾಕಷ್ಟು ಬಾರಿ ಆ ಸಮುದಾಯದ ಜೊತೆ ನಿಂತಿದ್ದೇವೆ. ಆದರೂ ಆ ಸಮುದಾಯ ನಮ್ಮ ಜೊತೆ ನಿಂತಿಲ್ಲ. ಎದೆಗುಂದಲ್ಲ ಹೋರಾಟದ ಹಿನ್ನೆಲೆಯಲ್ಲಿ ಈ ಪಕ್ಷ ಕಟ್ಟಿದ್ದೇವೆ. ವಯಸ್ಸು ಚಿಕ್ಕದಿದೆ ಎಲ್ಲವನ್ನೂ ಸಮಚಿತ್ತದಿಂದ ತಗೆದುಕೊಂಡಿದ್ದೇನೆ. ರಾಜ್ಯದ ನಿಷ್ಠಾವಂತ ಕಾರ್ಯಕರ್ತರೆಲ್ಲರಿಗೂ ಧ್ವನಿಯಾಗಿ ಇರುತ್ತೇನೆ ಎಂದರು.

ನಾನು ಮೂರು ಬಾರಿ ಸೋತಿದ್ದೇನೆ ಒಪ್ಪಿಕೊಳ್ಳುತ್ತೇನೆ. ನಾನು ಗೆಲುವನ್ನು ನೋಡಿಲ್ಲ. ಇತಿಹಾಸ ನೋಡಿದರೆ ಅಬ್ರಾಹಂ ಲಿಂಕನ್, ಅಂಬೇಡ್ಕರ್, ವಾಜಪೇಯಿ ಸೋತಿದ್ದು ಹೇಳುತ್ತಾರೆ. ಈ ಪರಿಸ್ಥಿತಿಯಲ್ಲಿ ಕಾರ್ಯಕರ್ತರಿಗೆ ಕೊಟ್ಟು ಅವರು ಸೋತಿದ್ದರೆ ಕುಟುಂಬ, ರಾಜಕಾರಣ, ಸ್ವಾರ್ಥ ಎಂಬ ಆರೋಪ ಬರುತ್ತಿತ್ತು. ಇವಾಗ ಈ ಹೊಣೆ ನಾನೇ ಹೊರುತ್ತೇನೆ ನೆಮ್ಮದಿಯಿಂದ ಮಲಗುತ್ತೇನೆ. ಈ ಒಂದು ಸೋಲಿನಿಂದ ಜಿಲ್ಲೆಯಲ್ಲಿ ಜೆಡಿಎಸ್ ಮುಕ್ತ ಅಂದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್‌ನವರು ಲೋಕಸಭೆಯಲ್ಲಿ ಸೋತರು ಅವರ ಬಲವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಾಗೆಯೇ ಈ ಗೆಲವಿನಿಂದ ಅವರ ಬಲ ಮತ್ತೆ ಹೆಚ್ಚಿದೆ ಎನ್ನಲು ಸಾಧ್ಯವಿಲ್ಲ. ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಸಂತೋಷವಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ಉಪಚುನಾವಣೆಯಲ್ಲಿ ಸೋತಿದ್ದೇವೆ, ಇವಿಎಂ ಹ್ಯಾಕ್ ಮಾಡಿದ್ದಾರೆ ಎನ್ನಲ್ಲ: ಜೋಶಿ

Share This Article