ಮೈಸೂರು: ನಾನು ಮುಖ್ಯಮಂತ್ರಿ ನೀವು ಪೊಲೀಸರು ಅನ್ನೋ ಅಂತರ ಬೇಡ. ನಾವೆಲ್ಲ ಒಂದೇ ಕುಟುಂಬದವರು. ನಾನು ನಿಮ್ಮ ಜೊತೆ ಇದ್ದೇನೆ ಅಂತ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಡಿವೈಎಸ್ಪಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಮುಲಾಜಿಗೆ ಒಳಗಾಗಬೇಡಿ. ಸ್ಥಳ ನಿಯುಕ್ತಿಗಾಗಿ ರಾಜಕಾರಣಿಗಳ ಮನೆ ಬಾಗಿಲು ಬಡಿಯಬೇಡಿ. ನೀವು ನಿಷ್ಠಾವಂತರಾಗಿದ್ದರೆ ಯಾವ ರಾಜಕಾರಣಿಗಳು ನಿಮ್ಮನ್ನು ಏನೂ ಮಾಡುವುದಕ್ಕೆ ಆಗುವುದಿಲ್ಲ. ಸರಕಾರ ಬರುತ್ತೆ ಹೋಗುತ್ತೆ. ಮುಖ್ಯಮಂತ್ರಿಗಳು ಬರುತ್ತಾರೆ ಹೋಗುತ್ತಾರೆ. ನೀವು ಮಾತ್ರ ಸುದೀರ್ಘವಾಗಿ ಕರ್ತವ್ಯದಲ್ಲಿ ಇರುತ್ತಿರಿ ಅಂತ ಸಲಹೆ ನಿಡಿದ್ದಾರೆ.
Advertisement
ನಿಮ್ಮ ಉತ್ತಮವಾದ ಕೆಲಸಕ್ಕೆ ನಾನು ಈ ಸ್ಥಾನದಲ್ಲಿ ಇರುವವರೆಗೂ ರಕ್ಷಣೆ ನೀಡುತ್ತೇನೆ. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ನಿಮ್ಮನ್ನು ರಕ್ಷಿಸುತ್ತೇನೆ. ಹಲವು ರಾಜಕಾರಣಿಗಳು ನಿಮ್ಮ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಾರೆ ಇದಕ್ಕೆ ಮಣಿಯಬೇಡಿ. ನಾನು ನಿಮ್ಮ ಜೊತೆ ಇದ್ದೇನೆ. ನಾನು ಮುಖ್ಯ ಮಂತ್ರಿ ನೀವು ಪೊಲೀಸರು ಎನ್ನೋ ಅಂತರ ಬೇಡ. ನಾವೆಲ್ಲ ಒಂದೇ ಕುಟುಂಬದವರು ಅಂತ ಹೇಳಿದ್ದಾರೆ.
Advertisement
Advertisement
ನಾನು ಭಾವನಾತ್ಮಕ ಜೀವಿ:
ನಾನು ವೈಯಕ್ತಿಕವಾಗಿ ಭಾವನಾತ್ಮಕ ಜೀವಿ. ಹೀಗಾಗಿ ಉದ್ದೇಶಪೂರಕವಾಗಿ ನನ್ನನ್ನು ಎಮೋಷಿನಲ್ ಬ್ಲಾಕ್ ಮೇಲ್ ಮಾಡುತ್ತಾರೆ. ನಾನು ಎಲ್ಲ ವಿಚಾರವನ್ನ ಭಾವನಾತ್ಮಕವಾಗಿ ನೋಡುತ್ತೇನೆ. ನನ್ನದು ಮೊಸಳೆ ಕಣ್ಣಿರು ಎನ್ನುವವರಿಗೆ ಮಾನವೀಯತೆ ಇಲ್ಲ. ನಾನೇನು ಮೊಸಳೆ ಕಣ್ಣಿರು ಹಾಕಿ ನಾಟಕ ಮಾಡೋದಿಲ್ಲ. ನನ್ನ ಆರೋಗ್ಯದ ಜೊತೆ ಯಾರು ಚೆಲ್ಲಾಟವಾಡಬೇಡಿ. ಬಡವರ ಬಗ್ಗೆ ನನ್ನಲ್ಲಿರುವ ಕಾಳಜಿ ಬಗ್ಗೆ ಅನುಮಾನ ಪಡಬೇಡಿ. ನನ್ನ ಆರೋಗ್ಯಕ್ಕಿಂತ ನನ್ನ ಜವಾಬ್ದಾರಿ ನಿರ್ವಹಣೆ ಮುಖ್ಯ. ಸಾಯುವವರೆಗೂ ಮುಖ್ಯಮಂತ್ರಿ ಆಗಿರುತ್ತೇನೆ ಎಂದುಕೊಂಡಿಲ್ಲ. ಜನಸೇವೆಯೇ ನನ್ನ ಗುರಿ ಎಂದರು.
Advertisement
ಯೋಗೇಶ್ವರ್ ಗೆ ತಿರುಗೇಟು:
ವರ್ಗವಣೆ ಹಣದಲ್ಲಿ ಸಿಎಂ ಚುನಾವಣೆ ಮಾಡುತ್ತಿದ್ದಾರೆ ಎಂಬ ಯೋಗೇಶ್ವರ್ ಆರೋಪಕ್ಕೆ, ಹೂ ಇಸ್ ದಿ ಯೋಗೇಶ್ವರ್? ಯೋಗೇಶ್ವರ್ ಒಬ್ಬ ದೋಖಾ ಮಾಡಿಕೊಂಡು ಬಂದವನು. ಅವನಿಗೆ ನನ್ನ ಬಗ್ಗೆ ಮಾತನಾಡುವ ನೈತಿಕ ಇಲ್ಲ. ವಿಧಾನಸೌಧದ ನನ್ನ ಕಚೇರಿಯಲ್ಲಿ ಮೆರಿಟ್ ಮೇಲೆ ಕೆಲಸ ಕೊಟ್ಟಿದ್ದೇನೆ. ಯಾರಿಗೂ ನಾನು ಪೇಮೆಂಟ್ ಮೇಲೆ ಕೆಲಸ ಕೊಟ್ಟಿಲ್ಲ. ಈ ಬಗ್ಗೆ ನಾನು ಓಪನ್ ಸವಾಲ್ ಹಾಕುತ್ತೇನೆ. ಯಾರ ಬಳಿಯಾದರೂ ಪೇಮೆಂಟ್ ಪಡೆದಿದ್ದನ್ನ ಸಾಬೀತು ಮಾಡಲಿ. ಯೋಗೇಶ್ವರ್ ಅರಣ್ಯ ಸಚಿವರಾಗಿದ್ದಾಗ ವರ್ಗಾವಣೆ ಮಾಡಿಯೇ ಖಾತೆ ನಿಭಾಯಿಸಿದ್ರಾ? ಜನರ ಸೈಟ್ ಖರೀದಿ ಮಾಡಲು ಇಟ್ಟಿದ್ದ ಹಣ ದೋಖಾ ಮಾಡಿಕೊಂಡು ಜೀವನ ಮಾಡುತ್ತಿದ್ದಾನೆ. ಅವನೇನು ನನಗೆ ನೈತಿಕತೆ ಪಾಠ ಹೇಳೋದು ಅಂತ ಖಾರವಾಗಿಯೇ ಸಿಎಂ ತಿರುಗೇಟು ನೀಡಿದರು.
ಉಗ್ರಪ್ಪ ಪರ ಪ್ರಚಾರ:
ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಸಿಎಂ ತೆರಳುವುದಿಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಉಪಚುನಾವಣೆಯಲ್ಲಿ ಉಗ್ರಪ್ಪ ಪರ ಪ್ರಚಾರ ಮಾಡುತ್ತೇನೆ. ಕೊನೆ ದಿನ ಮೈಸೂರಿನ ಕಾರ್ಯಕ್ರಮ ಮುಗಿಸಿ ಬಳ್ಳಾರಿಗೆ ಹೋಗುತ್ತೇನೆ. ಉಗ್ರಪ್ಪ ಎರಡು ಪಕ್ಷಗಳ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ಅವರ ಪರ ಪ್ರಚಾರ ಮಾಡುವುದು ನಮ್ಮ ಕರ್ತವ್ಯವಾಗಿದೆ. ದೇವೆಗೌಡರು ಸಹ ಬಳ್ಳಾರಿಗೆ ಹೋಗಿ ಪ್ರಚಾರ ಮಾಡುತ್ತಾರೆ. ಯಾರೋ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ದೂರಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv