ಚಿಕ್ಕಬಳ್ಳಾಪುರ: ನಾನು ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲ್ಲೆಯ ಒಕ್ಕಲಿಗ ಸಮುದಾಯದ ಮೂವರನ್ನು ಮಂತ್ರಿ ಮಾಡಿದ್ದೆ. ಹಾಸನದಲ್ಲೂ ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡಿದ್ದೆ. ಅಷ್ಟು ಮಟ್ಟದಲ್ಲಿ ಒಕ್ಕಲಿಗ ಶಾಸಕರನ್ನು ಸಚಿವರನ್ನಾಗಿ ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಚಿಕ್ಕಬಳಾಪುರ ವಿಧಾನಸಭಾ ಕ್ಷೇತ್ರದ ಮಂಚನಬಲೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ ಸೇರಿದಂತೆ ಎಲ್ಲಾ ಕಡೆ ಒಕ್ಕಲಿಗರನ್ನ ಮಂತ್ರಿ ಮಾಡಿದ್ದು ನಾನೇ. ಶಾಸಕ ಡಾ.ಸುಧಾಕರ್ ಅವರನ್ನು ಸಹ ಮಂತ್ರಿ ಮಾಡುವುದು ನಾನೇ. ಹೀಗಾಗಿ ಒಕ್ಕಲಿಗ ಸಮುದಾಯಕ್ಕೆ ಅತಿ ಹೆಚ್ಚು ಕೊಡುಗೆ ಕೊಟ್ಟ ನಾನು ನಿಜವಾದ ಒಕ್ಕಲಿಗ. ನನ್ನಷ್ಟು ದೊಡ್ಡ ಒಕ್ಕಲಿಗ ಯಾರು ಇಲ್ಲ ಎಂದು ಹೇಳಿದರು.
Advertisement
Advertisement
ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಜಾತಿ ಹೆಸರಲ್ಲಿ ನನಗೆ ಮತ ನೀಡದಂತೆ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನೀವು ಜಾತಿ ನೋಡದೇ ನನಗೆ ಮತ ನೀಡಿ. ಈ ಬಾರಿಯೂ ಗೆಲ್ಲಿಸುತ್ತೀರಿ ಎನ್ನುವ ವಿಶ್ವಾಸವಿದೆ ಎಂದು ಮತದಾರರ ಮನವೊಲಿಸಿದರು.
Advertisement
ಈ ಭಾಗಕ್ಕೆ ಎತ್ತಿನಹೊಳೆ ನೀರು ಹರಿಸಿಯೇ ನಾನು ಪ್ರಾಣ ಬಿಡುತ್ತೇನೆ ಎಂದು ಪುನರುಚ್ಚರಿಸಿದ ಸಂಸದರು, ಇದಕ್ಕೆ ಅನೇಕ ಮಂದಿ ವಿರೋಧಿಸಿದರು. ಆದರೆ ನಾನು ಹೆದರುವುದಿಲ್ಲ. ಈ ಭಾಗಕ್ಕೆ ನೀರು ಹರಿಸದೆ ಸಾಯುವುದಿಲ್ಲ. ಎತ್ತಿನಹೊಳೆ ಯೋಜನೆಯಿಂದ ಕರಾವಳಿ ಭಾಗದ ಜನರು ನನಗೆ ಕಪ್ಪು ಪತಾಕೆ ಹಾರಿಸಿದರು. ನಾನು ಅವರ ವಿರೋಧ ಕಟ್ಟಿಕೊಂಡೆ. ಯಾಕೆ ಸ್ವಂತ ಊರಿನವರ ವಿರೋಧ ಕಟ್ಟಿಕೊಳ್ಳುತ್ತಿಯಾ ಅಂತ ನನ್ನ ಕೆಲ ಹಿತೈಷಿಗಳು ಹೇಳಿದರು. ಆದರೆ ಎತ್ತಿನಹೊಳೆ ನೀರನ್ನು ಈ ಭಾಗಕ್ಕೆ ಹರಿಸುತ್ತೇನೆ ಎಂದು ಚಿಕ್ಕಬಳ್ಳಾಪುರ ಜನರಿಗೆ ಮಾತುಕೊಟ್ಟಿದ್ದೇನೆ. ಹೀಗಾಗಿ ಎತ್ತಿನಹೊಳೆ ಕಾಮಗಾರಿ ಐದು ವರ್ಷದಿಂದ ಭರದಿಂದ ಸಾಗುತ್ತಿದೆ. ಅದಕ್ಕೆ ಅಡ್ಡಿಪಡಿಸುವ ಕೆಲಸವನ್ನು ಈಗಲೂ ಮಾಡುತ್ತಿದ್ದಾರೆ. ನಾನು ಧರ್ಮಸ್ಥಳದ ಮಂಜುನಾಥನ ಪಾದ ತೊಳೆಯುವ ಪರಿಶುದ್ಧವಾದಂತಹ ಎತ್ತಿನಹೊಳೆ ನೀರನ್ನು ಹರಿಸಿಯೇ ಸಿದ್ಧ ಎಂದರು.