ಕಲಬುರಗಿ: ಇಷ್ಟು ದಿನ ಬೆಕ್ಕು ಕದ್ದು ಮುಚ್ಚಿ ಹಾಲು ಕುಡಿಯುತಿತ್ತು. ಆದರೆ ಇನ್ನು ಮುಂದೆ ಆ ರೀತಿ ಆಗಲು ಬಿಡಲ್ಲ. ಬೆಕ್ಕಿಗೆ ಘಂಟೆ ಕಟ್ಟಲು ನಾನು ತಯಾರಿದ್ದೇನೆ ಎಂದು ಪರೋಕ್ಷವಾಗಿ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಉಮೇಶ್ ಜಾಧವ್ ವಾಗ್ದಾಳಿ ನಡೆಸಿದ್ದಾರೆ.
ನಗರದ ಗಂಜ್ ಪ್ರದೇಶ, ಕಿರಾಣ ಬಜಾರ್, ಲೋಹರ್ ಗಲ್ಲಿ ಸೂಪರ್ ಮಾರ್ಕೆಟ್ ಸೇರಿದಂತೆ ವಿವಿಧೆಡೆ ಬೆಳಗ್ಗೆಯಿಂದಲೇ ಜಾಧವ್ ಅವರು ಮತಯಾಚಿಸಿದರು. ಪ್ರಚಾರ ಸಭೆಯಲ್ಲಿ ಮಾತಾನಾಡಿದ ಜಾಧವ್, ಬೆಕ್ಕಿನ ಕೊರಳಿಗೆ ಘಂಟೆ ಕಟ್ಟಲು ನಾನು ಸಿದ್ಧನಾಗಿದ್ದೇನೆ. ನೀವು ನನ್ನನ್ನು ಬೆಂಬಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಈ ಬಾರಿ ಲೋಕಸಭೆ ಚುನಾವಣೆ ನನ್ನ ರಾಜಕೀಯ ಜೀವನದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಅವರು ಎಷ್ಟೇ ಹಣ ಖರ್ಚು ಮಾಡಿದರೂ ಇತಿಹಾಸ ಬದಲಿಸುವ ಕೆಲಸ ನಿಮ್ಮ ಕೈಲಿದೆ. ಹೈದರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ ಇಂದಿಗೂ ಅನೇಕ ಜ್ವಲಂತ ಸಮಸ್ಯೆಗಳು ಕಾಡುತ್ತಿದೆ. ಸಮಸ್ಯೆಗಳ ಕೊನೆ ಕಾಣುವಂತೆ ಮಾಡಲು ನನಗೆ ಮತ ನೀಡಿ ಎಂದು ಕಾರ್ಯಕರ್ತರಿಗೆ ತಿಳಿಸಿದರು. ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ ಜಾಧವ್, ರಾಮನವಮಿ ದಿನ ಕಾವಿ ಶಲ್ಯಾ, ಟೋಪಿ ಹಾಕಿಕೊಂಡು ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಆದರೆ ಇವರು ಒಮ್ಮೆಯಾದರು ರಾಮನವಮಿ ಉತ್ಸವದಲ್ಲಿ ಭಾಗಿಯಾಗಿದ್ದರಾ ಎಂದು ಪ್ರಶ್ನಿಸಿದರು.
ಇತ್ತ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು, ಮಲ್ಲಿಕಾರ್ಜುನ ಖರ್ಗೆ ಹಳೆ ಎತ್ತು ಅದನ್ನ ಕೊಟ್ಟಿಗೆಯಲ್ಲಿ ಕಟ್ಟಿಹಾಕುತ್ತೇವೆ ಎಂದು ಕಿಡಿಕಾರಿದರು. ಈ ಹೇಳಿಕಗೆ ಟಾಂಗ್ ಕೊಟ್ಟ ಸಚಿವ ಪ್ರಿಯಾಂಕ್ ಖರ್ಗೆ ಅವರು, ಖರ್ಗೆ ಹಳೆ ಎತ್ತು ಎಂಬ ಹೇಳಿಕೆ ಸರಿ ಅಲ್ಲ. ಯಾರು ಹಳೆ ಎತ್ತು ಎಂದು ಜನ ತೀರ್ಮಾನ ಮಾಡುತ್ತಾರೆ. ಕಲಬುರಗಿ ಜನರು ಅಭಿವೃದ್ಧಿಗೆ ಮತಹಾಕುತ್ತಾರೆ ವಿನಾ: ಕೆಲಸ ಮಾಡದ ನಾಯಕರನ್ನು ತಿರಸ್ಕರಿಸುತ್ತಾರೆ. ಮುಂದಿನ ಬಾರಿಯಾದರೂ ಉತ್ತಮ ಕೆಲಸ ಮಾಡಿ, ಆ ಮೂಲಕ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಚಿಂತನೆ ನಡೆಸಿ. ಕೋಮು ಪಕ್ಷದ ಅಭ್ಯರ್ಥಿಗೆ ಚುನಾವಣೆಯಲ್ಲಿ ಗೆಲುವು ಕಷ್ಟಸಾಧ್ಯ ಎಂದರು.