ನಾನು ಕಾನೂನು ಉಲ್ಲಂಘಿಸಿಲ್ಲ, ಜಿಲ್ಲಾಡಳಿತ, ಪೊಲೀಸರಿಂದಲೇ ತಪ್ಪಾಗಿದೆ: ಪ್ರತಾಪ್ ಸಿಂಹ

Public TV
4 Min Read
PRATHAP SIMHA 2

ಮೈಸೂರು: ನಾನು ಯಾವುದೇ ಕಾನೂನು ಉಲ್ಲಂಘಿಸಿಲ್ಲ. ಜಿಲ್ಲಾಡಳಿತ ಮತ್ತು ಪೊಲೀಸರು ಆರಂಭದಲ್ಲಿ ಒಪ್ಪಿ ನಂತರ ಮಾತಿಗೆ ತಪ್ಪಿದ್ದರಿಂದ ಈ ಬೆಳವಣಿಗೆಯಾಗಿದೆ ಹೊರತು ಈ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಹನುಮ ಜಯಂತಿ ಮೆರವಣಿಗೆ ಸಂಬಂಧ ಯಾವೆಲ್ಲ ಪ್ರಯತ್ನ ನಡೆದಿತ್ತು? ಅದಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸ್ಪಂದನೆ ಹೇಗಿತ್ತು? ನಾನು ಯಾಕೆ ಬ್ಯಾರಿಕೇಡ್ ಕಿತ್ತು ಹಾಕಿ ಕಾರನ್ನು ಓಡಿಸಿದೆ ಎನ್ನುವುದರ ಬಗ್ಗೆ ಪ್ರತಾಪ್ ಸಿಂಹ ಪಬ್ಲಿಕ್ ಟಿವಿಗೆ ವಿವರವಾಗಿ ವಿವರಿಸಿದ್ದಾರೆ.

ಕಳೆದ 25 ವರ್ಷದಿಂದ ಹುಣಸೂರಿನಲ್ಲಿ ಹನುಮ ಜಯಂತಿ ನಡೆಯುತ್ತಿದೆ. ಕಳೆದ ವರ್ಷ ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಮೆರವಣಿಗೆಗೆ ಅವಕಾಶ ಮಾಡಿಕೊಡುತ್ತೇವೆ ಎಂದು ಎಸ್‍ಪಿ ಹೇಳಿದ್ದರು. ಅವರ ಮಾತಿಗೆ ಒಪ್ಪಿ ನಾವು ಕಳೆದ ವರ್ಷ ಅವರು ಹೇಳಿದಂತೆ ನಡೆದುಕೊಂಡಿದ್ದೆವು. ಈ ಬಾರಿ ನಾವು ಸಂಪ್ರದಾಯದ ಪ್ರಕಾರ ರಂಗನಾಥ ಬಡಾವಣೆಯಿಂದಲೇ ಮೆರವಣಿಗೆ ಮಾಡುತ್ತೇವೆ ಎಂದು ಒಂದು ತಿಂಗಳ ಹಿಂದೆಯೇ ಪ್ರೆಸ್ ಮೀಟ್ ಮಾಡಿ ಹೇಳಿದ್ದೆ. ಆದರೆ ಈ ಮಧ್ಯೆ ನವೆಂಬರ್ 27 ರಂದು ಜಿಎಲ್‍ಬಿ ರಸ್ತೆ, ಕಾರ್ಖಾನೆ ರಸ್ತೆ, ರಂಗನಾಥ ಬಡಾವಣೆಯಲ್ಲಿ ಮೆರವಣಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ನವೆಂಬರ್ 5ರಂದೇ ಈ ಆದೇಶ ಪ್ರಕಟವಾಗಿದ್ದರೂ ಯಾರಿಗೂ ಈ ವಿಚಾರ ತಿಳಿಸಲೇ ಇಲ್ಲ. ಅಷ್ಟೇ ಅಲ್ಲದೇ ಯಾವುದಾದರೂ ಮಾಧ್ಯಮಗಳಲ್ಲಿ ನಿರ್ಬಂಧ ವಿಧಿಸಿರುವ ವಿಚಾರವನ್ನು ತಿಳಿಸಿರಲಿಲ್ಲ.

PRATHAP SIMHA 3

ಈ ವಿಚಾರ ತಿಳಿದು ನಾನು ಎಸ್‍ಪಿ ಅವರ ಜೊತೆ ಮಾತನಾಡಿ ರಂಗನಾಥ ಸ್ವಾಮಿ ಬಡಾವಣೆಯಿಂದ ನಾವು ಮೆರವಣಿಗೆ ಹೋಗುತ್ತೇವೆ ಇದಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದೆ. ಇದಾದ ಬಳಿ ಜಿಲ್ಲಾಡಳಿತ ಪೊಲೀಸರ ಇದಕ್ಕೆ ನಾವು ಪರಿಹಾರ ಹುಡುಕುತ್ತೇವೆ ಎಂದು ಹೇಳಿ ಮನವಿಯನ್ನು ಗೃಹ ಕಾರ್ಯದರ್ಶಿಗೆ ತಿಳಿಸುತ್ತೇವೆ ಎಂದು ಹೇಳಿದರು. ಈ ನಡುವೆ ಗೃಹ ಕಾರ್ಯದರ್ಶಿ ನಾನು ಸೋಮವಾರದವರೆಗೆ ಸಿಗುವುದಿಲ್ಲ ಎಂದು ಹೇಳಿದರು. ನಾವು ಅನುಮತಿ ಸಿಕ್ಕರೆ ಮೆರವಣಿಗೆಯನ್ನು ಮುಂದೂಡುತ್ತೇವೆ ಎಂದು ಹೇಳಿದರು. ಈ ನಡುವೆ ಎಸಿಎಸ್ ಅವರು ನಮ್ಮ ಮನವಿಯನ್ನು ತಿರಸ್ಕರಿಸಿದ್ದಾರೆ ಎಂದು ಡಿಸಿ ಹೇಳಿದರು. ಅದಕ್ಕೆ ನಾವು ಮೆರವಣಿಗೆ ಮುಂದೂಡುತ್ತೇವೆ ಎಂದಾಗ ಹನುಮ ಜಯಂತಿ ಮುಕ್ತಾಯವಾಗುವವರೆಗೂ ಈ ನಿರ್ಬಂಧ ಮುಂದುವರಿಯುತ್ತದೆ ಎಂದು ಹೇಳಿದರು. ಒಂದು ವೇಳೆ ನವೆಂಬರ್ 5ರಂದು ನಿರ್ಬಂಧ ವಿಧಿಸಿರುವುದು ಗೊತ್ತಾಗಿದ್ದರೆ ನಾವು ನ್ಯಾಯಾಂಗ ಹೋರಾಟ ಮಾಡುತ್ತಿದ್ದೆವು. ಆ ವಿಚಾರವನ್ನು ಮುಚ್ಚಿಟ್ಟು ನವೆಂಬರ್ 27ಕ್ಕೆ ತಿಳಿಸಿದ್ದು ಯಾಕೆ? ಅಷ್ಟೇ ಅಲ್ಲದೇ ಕಳೆದ ವರ್ಷ ಅನುಮತಿ ನೀಡುತ್ತೇವೆ ಎಂದು ಹೇಳಿ ಈ ವರ್ಷ ಅನುಮತಿ ನೀಡದ್ದು ಯಾಕೆ? ಹೀಗಾಗಿ ಪ್ರಕರಣದಲ್ಲಿ ತಪ್ಪು ಯಾರದ್ದು ಎನ್ನುವುದನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಎದೆ ತಟ್ಟಿ ಹೇಳಲಿ ನೋಡಲಿ ಎಂದು ಅವರು ಸವಾಲು ಹಾಕಿದರು. (ಇದನ್ನೂ ಓದಿ: ಎಸ್‍ಪಿ ರವಿ ಚೆನ್ನಣ್ಣನವರ್ ಗೆ ಸಂಸದ ಪ್ರತಾಪ್ ಸಿಂಹ ಪರೋಕ್ಷ ಟಾಂಗ್)

ಈ ವಿಚಾರ ತಿಳಿದ ಬಳಿಕ ನಾವು ಮೆರವಣಿಗೆ ಹೋಗುವುದು ಸಿದ್ಧ ಎಂದಾಗ ಎಸ್‍ಪಿ ಅವರು ನಿಮ್ಮನ್ನು ನಾವು ಬಂಧಿಸಬೇಕಾಗುತ್ತದೆ ಎಂದು ಫೋನಿನಲ್ಲಿ ಹೇಳಿದ್ದರು. ಅದಕ್ಕೆ ನಾನು ನನ್ನನ್ನು ಬಂಧಿಸಿ ಎಂದು ತಿಳಿಸಿದ್ದೆ. ಆದರೆ ಮೈಸೂರಿನಲ್ಲಿ ನನ್ನನ್ನು ಬಂಧಿಸದೇ ಬಿಳಿಕೆರೆಯಲ್ಲಿ ಬಂಧಿಸಿದ್ದಾರೆ ಎಂದು ತಿಳಿಸಿದರು.

PRATHAP SIMHA 12

ತಪ್ಪು ಮಾಡಿಲ್ಲ: ಹುಣಸೂರಿನಲ್ಲಿ ಶಾಂತಿಯುತವಾಗಿ ಭಾಗವಹಿಸಿದ್ದ ಜನರ ಮೇಲೆ ಲಾಠಿ ಚಾರ್ಜ್ ಮಾಡಿದ್ದು ಗೊತ್ತಾಗಿ ಅಲ್ಲಿ ನಾನು ತೆರಳಲು ಹೋಗುತ್ತಿದ್ದಾಗ ಬಿಳಿಕೆರೆ ಬಳಿ ಎಲ್ಲ ವಾಹನಗಳನ್ನು ತಡೆದು ನಿಲ್ಲಿಸಿ ಪೊಲೀಸರು ತಪಾಸಣೆ ಮಾಡುತ್ತಿದ್ದರು. ಆ ಪ್ರದೇಶದಲ್ಲಿ ಯಾವುದೇ ನಿರ್ಬಂಧ ವಿಧಿಸಲಾಗಲಿಲ್ಲ. ಅಷ್ಟೇ ಅಲ್ಲದೇ ಬ್ಯಾರಿಕೇಡ್ ಹಾಕಿರಲಿಲ್ಲ. ಈ ವಿಚಾರ ತಿಳಿದು ಯಾಕೆ ವಾಹನಗಳನ್ನು ತಡೆಯುತ್ತಿದ್ದೀರಿ ಎಂದು ನಾನು ಕಾರು ನಿಲ್ಲಿಸಿ ಪೊಲೀಸರನ್ನು ಪ್ರಶ್ನಿಸಲು ಮುಂದಾಗುತ್ತಿದ್ದಾಗ ನಾನು ಮುಂದೆ ಹೋಗಬಾರದು ಎನ್ನುವುದಕ್ಕೆ ಬ್ಯಾರಿಕೇಡ್ ಹಾಕಿದ್ದಾರೆ. ಹೀಗಾಗಿ ನಾನು ಕಾರನ್ನು ಚಲಾಯಿಸಿದ್ದೇನೆ. ಕಾರಿನ ಮುಂಭಾಗಕ್ಕೆ ಬ್ಯಾರಿಕೇಡ್ ತಾಗಿದೆ ಬೇರೆ ಏನೂ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜಿಲ್ಲಾಡಳಿತ, ಎಸ್‍ಪಿಗೆ ಸವಾಲ್: ಈ ಘಟನೆಯಲ್ಲಿ ತಪ್ಪು ಯಾರದ್ದು ಎನ್ನುವುದು ಎಲ್ಲರಿಗೂ ತಿಳಿಯಬೇಕು. ಹೀಗಾಗಿ ನಾನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಜೊತೆ ಕೇಳಿಕೊಳ್ಳುತ್ತೇನೆ. ಎಲ್ಲ ಮಾಧ್ಯಮಗಳ ಮುಂದೆ ಅವರು ಮಾತನಾಡಲಿ. ನಾನು ಮಾತನಾಡುತ್ತೇನೆ. ಎಲ್ಲರೂ ಬನ್ನಿ ಮಾಧ್ಯಮದ ಮುಂದೆ ಮಾತನಾಡೋಣ. ಇದು ಯಾಕೆ ಆಯ್ತು ಅಂತ ಕೇಳೋಣ. ಪೊಲೀಸ್ ಇಲಾಖೆಯಲ್ಲಿ ಕೆಲವರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಿಂತಲೂ ಪ್ರತಿಷ್ಟೆ ಅಹಂ ದೊಡ್ಡದಾಗಿದೆ. ನನ್ನ ಮೇಲೆ ನೂರು ಕೇಸ್ ಹಾಕಬಹುದು. ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸವಿದೆ. ಈದ್ ಮಿಲಾದ್, ಟಿಪ್ಪು ಸುಲ್ತಾನ್ ಜಯಂತಿಯ ಮೆರವಣಿಗೆ ಅವಕಾಶ ನೀಡಲಾಗುತ್ತದೆ. ಆದರೆ ಹಿಂದೂಗಳ ಹಬ್ಬಕ್ಕೆ ನಿರ್ಬಂಧ ಯಾಕೆ? ಯಾವುದೇ ಧರ್ಮದ ಆಚರಣೆಗೆ ಅಡ್ಡಿ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಈ ಹಿಂದೆಯೇ ತೀರ್ಪು ನೀಡಿದೆ. ಆದರೆ ಸರ್ಕಾರ 25 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯಕ್ಕೆ ಅನುಮತಿ ನೀಡದ್ದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

PRATHAP SIMHA 11

ಕಲ್ಲಪ್ಪ ಹಂಡಿಭಾಗ್, ಬಂಡೆ ಶೂಟೌಟ್ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದವರು ಯಾರು ಎನ್ನುವುದು ಗೊತ್ತಿದೆ. ನಾನು ಇದೂವರೆಗೂ ಪೊಲೀಸರಿಗೆ ಏಕವಚನದಲ್ಲಿ ಬೈದಿಲ್ಲ. ಕೊಪ್ಪಳದಲ್ಲಿ ಸಿಎಂ ಬೈದಿದ್ದು ಗೊತ್ತಿದೆ. ಅಧಿಕಾರಿಗಳ ಹತ್ಯೆಯಲ್ಲಿ ಭಾಗಿಯಾದವರನ್ನು ಸಂಪುಟದಲ್ಲಿ ಇಟ್ಟುಕೊಂಡು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಸಿಎಂ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ಮಾಧ್ಯಮಗಳ ಮೇಲೆ ಪ್ರಶ್ನೆ: ಭಾನುವಾರ ನಾನು ಮಾಡಿದ್ದು ತಪ್ಪು ಎಂದು ನೀವು ಸುದ್ದಿ ಪ್ರಸಾರ ಮಾಡುತ್ತಿದ್ದೀರಿ. ಆದರೆ ಶಾಂತಯುತವಾಗಿ ಭಾಗಿಯಾದವರ ಮೇಲೆ ಲಾಠಿಚಾರ್ಜ್ ಮಾಡಿದ್ದು ಎಷ್ಟು ಸರಿ ಎನ್ನುವುದನ್ನು ಯಾಕೆ ಪ್ರಶ್ನೆ ಮಾಡುವುದಿಲ್ಲ? ಟಿಪ್ಪು ಜಯಂತಿ ಮತ್ತು ಈದ್ ಮಿಲಾದ್ ಮೆರವಣಿಗೆ ನಡೆಸಲು ಅನುಮತಿ ನೀಡಿ ನಮಗೆ ನಿರ್ಬಂಧ ವಿಧಿಸಿದ್ದನ್ನು ಯಾಕೆ ನೀವು ಪ್ರಶ್ನಿಸಲ್ಲ ಎಂದು ಕೇಳಿದರು. ಇದನ್ನು ಓದಿ:  ಹನುಮ ಮಾಲಾಧಾರಿಗಳ ಮೆರವಣಿಗೆ ತಡೆದಿದ್ದು ಯಾಕೆ: ಎಸ್‍ಪಿ ರವಿ ಚನ್ನಣ್ಣವರ್ ಹೇಳ್ತಾರೆ ಓದಿ

PRATHAP SIMHA 10

PRATHAP SIMHA 9

PRATHAP SIMHA 8

PRATHAP SIMHA 6

PRATHAP SIMHA 5

PRATHAP SIMHA 2

PRATHAP SIMHA 1

Share This Article
Leave a Comment

Leave a Reply

Your email address will not be published. Required fields are marked *