-ಕೊಟ್ಟರೆ ಕೊಡಲಿ, ಬಿಟ್ರೆ ಬಿಡಲಿ. ನಾನು ಹೋಗಿ ಕೇಳಿಲ್ಲ
ದಾವಣಗೆರೆ: ಸಚಿವ ಸಂಪುಟ ವಿಸ್ತರಣೆಯಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಹೈಕಮಾಂಡ್‍ಗೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ಕೊಡಿ ಅಂತ ನಾನು ಹೈಕಮಾಂಡ್ ಮುಂದೆ ಭಿಕ್ಷೆ ಬೇಡಲ್ಲ. ಕೊಟ್ಟರೆ ಕೊಡಲಿ. ಬಿಟ್ರೆ ಬಿಡಲಿ. ನಾನು ಹೋಗಿ ಕೇಳಿಲ್ಲ ಅದರ ಬಗ್ಗೆ ಆಸೆಯನ್ನು ಇಟ್ಟುಕೊಂಡಿಲ್ಲ. ಸಚಿವ ಸ್ಥಾನದ ಬಗ್ಗೆ ನನಗೆ ಯಾರಿಂದನೂ ಫೋನ್ ಬಂದಿಲ್ಲ. ನನಗೆ ಸಚಿವ ಸ್ಥಾನ ಕೊಡಿ ಅಂತ ಯಾವ ಲೀಡರ್ ಗಳಿಗೂ ಕೇಳಿಲ್ಲ ಎಂದರು.
ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರಿಗಾದರೂ ಕೊಡಲಿ, ಮತ್ತೊಬ್ಬರಿಗಾದರೂ ಮಂತ್ರಿಗಿರಿ ಕೊಡಲಿ. ನಾನು ಯಾರೊಬ್ಬರ ಜೊತೆಗೂ ಈ ವಿಚಾರವಾಗಿ ಚರ್ಚೆ ಮಾಡಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ರಮೇಶ್ ಜಾರಕಿಹೊಳಿ ಸ್ಥಾನವನ್ನು ಕಿತ್ತುಕೊಂಡು ಅವರ ಸಹೋದರ ಸತೀಶ್ ಜಾರಕಿಹೊಳಿ ಅವರಿಗೆ ಮಂತ್ರಿ ಸ್ಥಾನ ಕೊಡುತ್ತಿದ್ದಾರೆ. ಕಳೆದ ಬಾರಿಯೂ ನನ್ನ ಕೈಬಿಟ್ಟು ನನ್ನ ಮಗನಿಗೆ ಮಂತ್ರಿಗಿರಿ ನೀಡಿದ್ದರು ಎಂದು ಅಸಮಾಧಾನ ಹೊರಹಾಕಿದರು.
ನಾನು ಹೈಕಮಾಂಡ್ ಮಟ್ಟದಲ್ಲಿ ಸಚಿವ ಸ್ಥಾನಕ್ಕೆ ಲಾಬಿ ನಡೆಸಲಿಲ್ಲ ಎಂದು ಪುರುಚ್ಚರಿಸಿದ ಮಾಜಿ ಸಚಿವರು, ನನ್ನ ಮಾತು ಕಾಂಗ್ರೆಸ್‍ನವರು ಕೇಳುತ್ತಾರಾ ಎಂದು ಪ್ರಶ್ನಿಸಿ, ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ನನಗೆ ಅಸಮಾಧಾನವಿಲ್ಲ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv