ಮೈಸೂರು: ನಾನು ಎಲ್ ಬೋರ್ಡ್ ಎಂದು ತಿಳಿಯಬೇಡಿ. ಇಲ್ಲಿ ಯಾರು ಯಾರಿಗೂ ದೊಡ್ಡವರಲ್ಲ. ನನಗೂ ಕಾರ್ಯಕ್ರಮಗಳನ್ನು ಮಾಡಿದ ಅನುಭವಿದೆ. ಆದರೂ ಕಲಿಯುವುದು ಸಾಕಷ್ಟಿದೆ. ದಸರಾ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಲಹೆ ಕೊಡುವುದಿದ್ದರೂ ಕೊಡಲಿ ಎಂದು ತಿರುಗೇಟು ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, 14 ತಿಂಗಳು ಕುಮಾರಸ್ವಾಮಿ ಅವರು ಯಾವ ರೀತಿ ಅಧಿಕಾರ ಮಾಡಿದ್ದರು ಎಂದು ಮೊದಲು ಅವಲೋಕನ ಮಾಡಿಕೊಳ್ಳಲಿ. ತಾಯಿ ಚಾಮುಂಡೇಶ್ವರಿ ಮುಂದೆ ನಿಂತುಕೊಂಡು ಯೋಚನೆ ಮಾಡಲಿ. ಯಾರು ಯಾರಿಗೂ ದೊಡ್ಡವರಲ್ಲ, ನಾನು ಎಲ್ ಬೋರ್ಡ್ ಅಲ್ಲ ಕಾರ್ಯಕ್ರಮ ಮಾಡಿದ ಅನುಭವ ನನಗಿದೆ. ಹಾಗೆಯೇ ಈ ಹಿಂದೆ ದಸರಾ ಉತ್ಸವವನ್ನು ನಡೆಸಿದ ನಾಯಕರ ಸಲಹೆಯನ್ನು ಪಡೆಯುತ್ತೇನೆ. ಒಂದು ವೇಳೆ ಕುಮಾರಸ್ವಾಮಿ ಅವರು ಏನಾದರೂ ಸಲಹೆ ನೀಡುವುದಾದರೆ ನೀಡಲಿ ಎಂದು ಟಾಂಗ್ ಕೊಟ್ಟರು.
Advertisement
Advertisement
ಪ್ರವಾಹ ಪೀಡಿತ ಪ್ರದೇಶಗಳಿಗೆ ಯಡಿಯೂರಪ್ಪ ಯುವಕರಂತೆ ಸುತ್ತಾಡುತ್ತಿದ್ದಾರೆ. ಅವರೊಂದಿಗೆ ನಾವು ಕೂಡ ಹೋಗಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದೇವೆ. ಕುಮಾರಸ್ವಾಮಿ ಅವರು ಕೂಡ ಎರಡು ಬಾರಿ ಸಿಎಂ ಆಗಿದ್ದರು. ತಮ್ಮ ಕಾರ್ಯ ವೈಖರಿ ಬಗ್ಗೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ. 1996ರಲ್ಲಿ ಕುಮಾರಸ್ವಾಮಿ ರಾಜಕಾರಣಕ್ಕೆ ಬಂದವರು. ನಾನು 1983ರಲ್ಲಿಯೇ ರಾಜಕಾರಣಕ್ಕೆ ಬಂದಿದ್ದೇನೆ. ಅವರು ಅದೃಷ್ಟದಿಂದ ಮುಖ್ಯಮಂತ್ರಿ ಆದವರು. ಅದೃಷ್ಟ ಯಾರ ಅಪ್ಪನ ಮನೆ ಸ್ವತ್ತು ಅಲ್ಲ. ಅವರಿಗೆ ಅದೃಷ್ಟ ಇತ್ತು ಮುಖ್ಯಮಂತ್ರಿ ಆದರು ನಾನು ಮಂತ್ರಿಯಾದೆ ಅಷ್ಟೇ ಎಂದು ಹೇಳಿದರು.
Advertisement
ಜಿಲ್ಲೆಯಲ್ಲಿರುವ ಸಮಸ್ಯೆಯನ್ನು ಪರಿಹರಿಸಲು ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಸದ್ಯ ಪ್ರವಾಹದಿಂದ ಆಗಿರುವ ಅನಾನುಕುಲವನ್ನು ಸರಿಪಡಿಸುವ ಕಾರ್ಯದಲ್ಲಿ ಸರ್ಕಾರ ತೊಡಗಿದೆ. ರಾಜ್ಯದಲ್ಲಿ ಅತಿವೃಷ್ಟಿಯಿಂದ 32 ಸಾವಿರ ಕೋಟಿಯಷ್ಟು ನಷ್ಟವಾಗಿದೆ ಎನ್ನುವ ವರದಿಯನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಕೇಂದ್ರ ಸರ್ಕಾರವೂ ಕೂಡ ಇದಕ್ಕೆ ಸ್ಪಂಧಿಸುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದು ತಿಳಿಸಿದರು.
Advertisement
ಸೋಮಣ್ಣ ಅವರು ಏನು ಇಲ್ಲೇ ಮನೆ ಕಟ್ಟುತ್ತಾರಾ? ಮಡಿಕೇರಿಯಲ್ಲಿ ನಾವು ಏನೆಲ್ಲಾ ಕಟ್ಟಿದ್ದೇವೆ ಎಂದು ಎಚ್‍ಡಿಕೆ ಅವರು ಹೇಳಿದ್ದರು. ಈ ಬಗ್ಗೆ ನನ್ನ ಬಳಿ ಎಲ್ಲಾ ಮಾಹಿತಿ ಇದೆ. ಅಂಕಿ ಅಂಶಗಳ ಸಮೇತ ದಾಖಲೆಗಳಿವೆ. ಕುಮಾರಸ್ವಾಮಿ ಸಾಯಬ್ರೆ ಈ ಬಗ್ಗೆ ಚರ್ಚೆ ಬೇಡ, ನಾನು ಈಗ ಇದರ ಕುರಿತು ಮಾತನಾಡಲ್ಲ ಎಂದರು.
ದಸರಾ ಉತ್ಸವದ ಬಗ್ಗೆ ಮಾತನಾಡಿ, ದಸರಾ ಐತಿಹಾಸಿಕ ಪಾರಂಪರಿಕ ಆಚರಣೆ. ನಾನು ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳಿಗೆ ಹೋಗಿದ್ದೇನೆ. ಈಗಲೂ ಹಲವು ಕಡೆ ಸುತ್ತಾಡಿ ಜಿಲ್ಲೆಯ ಬಗ್ಗೆ ತಿಳಿಯುತ್ತಿದ್ದೇನೆ. ದೇವೇಗೌಡರು ಈ ರಾಷ್ಟ್ರದ ಮಾಜಿ ಪ್ರಧಾನಿಗಳು. ಜಿ.ಟಿ ದೇವೇಗೌಡರು ಕೂಡ ಪ್ರಭಾವಿ ನಾಯಕರು. ಅವರಿಗೆ ದಸರಾ ಮಾಡಿ ಅನುಭವವಿದೆ. ರಾಮದಾಸ್, ಶ್ರೀನಿವಾಸ್ ಪ್ರಸಾದ್, ಮಹದೇವಪ್ಪ ಅವರಿಗೂ ದಸರಾ ಮಾಡಿ ಅನುಭವವಿದೆ. ನಾನು ಎಲ್ ಬೋರ್ಡ್ ಎಂದು ತಿಳಿದುಕೊಳ್ಳಬೇಡಿ. ನನಗೂ ಸ್ವಲ್ಪ ಅನುಭವವಿದೆ. ಆದರೂ ಕಲಿತುಕೊಳ್ಳೋದು ಕೂಡ ಸಾಕಷ್ಟಿದೆ. ಇಲ್ಲಿ ಯಾರು ಯಾರಿಗೂ ದೊಡ್ಡವರಲ್ಲ. ಆದ್ದರಿಂದ ನನ್ನ ಮಿತ್ರರಾಗಿರುವ ಸಾರಾ ಮಹೇಶ್ ಅವರನ್ನೂ ಸಂಪರ್ಕಿಸಿದ್ದೇನೆ. ತನ್ವೀರ್ ಸೇಠ್ ಅವರನ್ನೂ ಸಂಪರ್ಕಿಸಿದ್ದೇನೆ. ನಾನು ಜಿಟಿಡಿ ಅವರನ್ನೂ ಸಂಪರ್ಕ ಮಾಡಿದ್ದೂ ನಿಜ. ಅವರ ಸಲಹೆ ಪಡೆದಿರುವುದು ನಿಜ. ಎಲ್ಲರ ಬಳಿ ಏನೇನು ಸಲಹೆ ನೀಡಿ, ಉತ್ಸವಕ್ಕೆ ಸಹಾಯ ಮಾಡಿ ಎಂದಿದ್ದೇನೆ. ದಸರಾ ಬಗ್ಗೆ ಕುಮಾರಸ್ವಾಮಿ ಸಲಹೆ ಇದ್ದರೂ ಕೊಡಲಿ. ಅದನ್ನು ಸ್ವೀಕರಿಸುತ್ತೇನೆ ಎಂದು ಮಾತಿನ ಚಾಟಿ ಬೀಸಿದ್ದಾರೆ.
ಇದು ನಾಡಹಬ್ಬ ಎಲ್ಲರೂ ಮಾಡಬೇಕಾದ ಹಬ್ಬ. ಬರೀ ಅಧಿಕಾರಿಗಳು ಮಾತ್ರ ಮಾಡುವ ಹಬ್ಬವಲ್ಲ. ಇಡೀ ರಾಜ್ಯದವರು ಸೇರಿಕೊಂಡು ಮಾಡಬೇಕಾದ ಹಬ್ಬ. ಈ ಬಗ್ಗೆ ಅವರು ಅರಿತುಕೊಂಡರೆ ಒಳ್ಳೆದು. ಇದಕ್ಕಿಂತ ಅವರ ಬಗ್ಗೆ ಹೆಚ್ಚು ಏನು ಹೇಳಲ್ಲ. ಯಾರು ಏನು ಬೇಕಾದರೂ ಅಂದುಕೊಳ್ಳಲಿ. ಈ ಪಾರಂಪರಿಕ ನಾಡಹಬ್ಬ ಪ್ರತಿಒಬ್ಬರಿಗೂ ತಲುಪಬೇಕು ಎನ್ನುವುದೇ ಸಿಎಂ ಅವರ ಆಶಯವಾಗಿದೆ. ಆದ್ದರಿಂದ ನಾನು ಏನೇನು ಮಾಡಬೇಕೋ ಮಾಡುತ್ತಿದ್ದೇನೆ. ದಸರಾ ಯಶಸ್ವಿಯಾಗಲೂ ಎಲ್ಲರ ಸಹಕಾರ ಕೋರುತ್ತೇನೆ. ಯಾರ್ಯಾರು ಏನೇನು ಮಾತನಾಡಬೇಕೋ ಅದನ್ನು ಅ.8ರ ನಂತರ ಮಾತನಾಡಲಿ ಎಂದು ಸ್ಪಷ್ಟಪಡಿಸಿದರು. ಹಾಗೆಯೇ ಕೇಂದ್ರದ ನಾಯಕರಿಗೂ ದಸರೆಗೆ ಆಹ್ವಾನ ನೀಡಲಾಗುವುದು. ದಸರಾ ಮುಗಿದ ನಂತರ ಒಂದು ಕ್ಷಣ ವ್ಯರ್ಥ ಮಾಡದೇ ವಸತಿ ಇಲಾಖೆ ಕೆಲಸ ಮಾಡುತ್ತೇನೆ ಎಂದು ಭರವಸೆಯನ್ನು ನೀಡಿದರು.