ತುಮಕೂರು: ಸಿದ್ದಗಂಗಾ ಶ್ರೀಗಳ ಗದ್ದುಗೆಯ ಬಳಿ ಕರ್ತವ್ಯನಿರತ ಎಸ್‍ಪಿ ದಿವ್ಯಾ ಗೋಪಿನಾಥ್ ಅವರನ್ನು ಸಚಿವ ಸಾ.ರಾ.ಮಹೇಶ್ ನಿಂದಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ದಿವ್ಯಾ ಗೋಪಿನಾಥ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ ನಾನು ಕಣ್ಣೀರು ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಶ್ರೀಗಳ ಅಂತಿಮ ದರ್ಶನ ಪಡೆಯಲು ಮಠಕ್ಕೆ ಲಕ್ಷಾಂತರ ಭಕ್ತರು ಬಂದಿದ್ದರು. ನಾವು ಎಷ್ಟೇ ಬಂದೋಬಸ್ತ್ ಒದಗಿಸಿದ್ದರೂ ಸಣ್ಣ ಪುಟ್ಟ ಏರುಪೇರುಗಳು ಆಗೋದು ಸಹಜ. ಗದ್ದುಗೆಯ ಹತ್ತಿರ ಸಚಿವರು ಬಂದಾಗ ನಮ್ಮ ಅಧಿಕಾರಿಗಳು ತಡೆದರು. ಕೊನೆಗೆ ಮಂತ್ರಿಗಳು ಅಂತಾ ತಿಳಿದಾಗ ಒಳಗೆ ಬಿಡಲಾಯ್ತು. ಇಷ್ಟೊಂದು ದೊಡ್ಡ ಬಂದೋಬಸ್ತ್ ಮಾಡಿದ್ದಕ್ಕೆ ಸಿಎಂ, ಡಿಸಿಎಂ ಮತ್ತು ಗೃಹ ಸಚಿವರು ಸೇರಿದಂತೆ ನಾಡಿನ ಜನತೆ ಮೆಚ್ಚುಗೆ ಸೂಚಿಸಿದ್ದಾರೆ. ಸಚಿವರು ಬಂದಾಗ ಒಳಗಡೆ ನಾವು ಬಿಡಬೇಕಾಗಿತ್ತು. ಗದ್ದುಗೆ ಒಳಾಂಗಣದಲ್ಲಿ ಸ್ಥಳಾವಕಾಶ ಇದ್ದಿದ್ದರಿಂದ ಕೊನೆಗೆ ಸಚಿವರನ್ನು ಬಿಡಲಾಯ್ತು ಎಂದು ದಿವ್ಯಾ ಗೋಪಿನಾಥ್ ತಿಳಿಸಿದ್ದಾರೆ.
ಗದ್ದುಗೆ ಒಳಗಡೆ ಹೋಗುವುದಕ್ಕೆ ಮಠದ ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳು ಕೆಲವು ನಿಯಮಗಳನ್ನು ತಂದಿದ್ದರು. ಗದ್ದುಗೆ ಚಿಕ್ಕದಾಗಿದ್ದರಿಂದ ಎಲ್ಲರಿಗೂ ಅಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಪೂಜಾಕೈಂಕರ್ಯಗಳಿಗೆ ತೊಂದರೆ ಆಗಬಹುದು ಎಂದು ತಿಳಿದು ಪ್ರಮುಖರನ್ನು ಮಾತ್ರ ಬಿಡಬೇಕು ಎಂದ ಆದೇಶ ನಮಗೆ ರವಾನೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರವೇಶದಲ್ಲಿ ಎಲ್ಲರನ್ನು ಪರಿಶೀಲಿಸಿ ಒಳಗಡೆ ಬಿಡಲಾಗುತ್ತಿತ್ತು. ಈ ವೇಳೆ ನಾನು ಕಣ್ಣೀರು ಹಾಕಿಲ್ಲ. ನಾವು ಪ್ರೊಫೆಶನಲ್ ಪೊಲೀಸರಾಗಿದ್ದು, ಈ ರೀತಿಯ ಸಣ್ಣ-ಪುಟ್ಟ ಘಟನೆಗಳು ನಡೆಯುತ್ತವೆ. ಕೆಲವೊಂದು ಬಾರಿ ನಮ್ಮ ಕಟ್ಟುನಿಟ್ಟಿನ ನಡೆಯಿಂದ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ರೆ, ಮತ್ತೊಮ್ಮೆ ಸಚಿವರಿಗೂ ಬೇಜಾರುಗುತ್ತದೆ. ನಮ್ಮ ಉದ್ದೇಶ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬುದಾಗಿತ್ತು ಎಂದು ಹೇಳಿದರು.
https://www.youtube.com/watch?v=zvG1bIidF1M
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv