ಬೆಂಗಳೂರು: ವಿಧಾನಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ನಾಯಕರು ಕನ್ನಡದ ಸ್ಟಾರ್ ನಾಯಕರನ್ನು ಬಳಸಿ ಪ್ರಚಾರ ಮಾಡಲು ಆರಂಭಿಸಿದ್ದು, ನಟ ಯಶ್ ಈ ಕುರಿತು ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಈಗಾಗಲೇ ಯಶೋಮಾರ್ಗದ ಮೂಲಕ ರಾಜ್ಯದ ಜನರ ಮನೆಸೆಳೆದಿರೋ ನಟ ಯಶ್ ಯಾವ ಪಕ್ಷದ ಪರ ಪ್ರಚಾರ ಮಾಡುತ್ತಾರೆಂಬ ಕುತೂಹಲ ಮೂಡಿತ್ತು. ಆದ್ರೆ ಇದೀಗ ಯಶ್ ಪ್ರತಿಕ್ರಿಯೆ ನೀಡುವ ಮೂಲಕ ಜನರ ಕುತೂಹಲಕ್ಕೆ ತೆರೆಬಿದ್ದಿದೆ. ಈಗಾಗಲೇ ನಟಿ ಮಾಲಾಶ್ರೀ, ನಟ ಸಾಧುಕೋಕಿಲ ಹಾಗು ಇನ್ನೂ ಅನೇಕರು ರಾಜಕೀಯ ಪಕ್ಷ ಹಾಗೂ ವ್ಯಕ್ತಿಗಳ ಪರವಾಗಿ ಪ್ರಚಾರ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
Advertisement
ಯಶ್ ಹೇಳಿದ್ದೇನು?: ನಾನು ಯಾವುದೇ ಪಕ್ಷದ ಪರ ಪ್ರಚಾರಕ್ಕೆ ಹೋಗಲ್ಲ. ಯಾಕಂದ್ರೆ ಒಂದಾ ಪಕ್ಷದ ಅಭ್ಯರ್ಥಿಗಳು ನನ್ನ ಸ್ನೇಹಿತರಾಗಿರಬೇಕು. ಇಲ್ಲವೇ ಅವರ ಬಗ್ಗೆ ನನಗೆ ತಿಳಿದಿರಬೇಕು. ಆದ್ರೆ ರಾಜಕೀಯದಲ್ಲಿ ನನಗೆ ಯಾರೂ ಕೂಡ ಪರಿಚಯವಿಲ್ಲ. ರಾಜಕೀಯದ ನಂಟೂ ಕೂಡ ನನಗಿಲ್ಲ. ಹೀಗಾಗಿ ಒಂದು ಪಕ್ಷದ ಪರ ಪ್ರಚಾರಕ್ಕೆ ತೆರಳುವುದು ನನ್ನ ವೈಯಕ್ತಿಕ ದೃಷ್ಟಿಯಿಂದ ಸರಿಯಿಲ್ಲ ಅಂತ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
Advertisement
ನಟ ಯಶ್ ಅಭಿನಯದ ಸ್ಪರ್ಶ ರೇಖಾ ನಿರ್ಮಾಣದ `ಡೆಮೋ ಪೀಸ್’ ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನನಗೂ, ರಾಜ್ಯ ರಾಜಕಾರಣಕ್ಕೂ ಸಂಬಂಧವಿಲ್ಲ ಎನ್ನುವ ಮೂಲಕ ಯಶ್ ರಾಜಕೀಯಕ್ಕೆ ಬರುತ್ತಾರೆ ಅನ್ನೋ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.