– ಮೋದಿಯೇ ನಮ್ಮ ನಾಯಕ, ಅವರೇ ಮುಂದಿನ ಪ್ರಧಾನಿ
ನವದೆಹಲಿ: ನಾನು ಕಪ್ಪು ಕುದುರೆಯಲ್ಲ, ಪ್ರಧಾನಿ ಹುದ್ದೆಯ ಆಕಾಂಕ್ಷಿಯೂ ಅಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಪ್ರಧಾನಿ ಹುದ್ದೆಯ ಬಗ್ಗೆ ನಾನು ಯಾವುದೇ ಅಜೆಂಡಾ, ಬಯಕೆ, ಕನಸು ಕಟ್ಟಿಕೊಂಡಿಲ್ಲ. ನರೇಂದ್ರ ಮೋದಿ ಅವರು ನಮ್ಮ ನಾಯಕರು, ಅವರೇ ಪ್ರಧಾನಿಯಾಗುತ್ತಾರೆ ಎಂದು ಸ್ಪಷ್ಟನೆ ನೀಡಿದರು.
Advertisement
Advertisement
ಬಿಜೆಪಿ ನೇತೃತ್ವದ ಎನ್‍ಡಿಎ ಒಕ್ಕೂಟಕ್ಕೆ ಬಹುಮತ ಸಿಗುತ್ತದೆ ಎಂಬ ವಿಶ್ವಾಸವಿದೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತೆ ಸರ್ಕಾರ ರಚನೆಯಾಗಲಿದೆ ಎಂದು ತಿಳಿಸಿದರು.
Advertisement
ನಾವು ಎನ್‍ಡಿಎ ಸರ್ಕಾರವನ್ನು ರೂಪಿಸುತ್ತೇವೆ, ಬಿಜೆಪಿ ಸರ್ಕಾರವನ್ನಲ್ಲ. ಲೋಕಸಭಾ ಚುನಾವಣೆ ಫಲಿತಾಂಶ ಮೇ 23ರಂದು ಬರಲಿದ್ದು, ಬಿಜೆಪಿಗೆ ಬಹುಮತ ಸಿಕ್ಕಿದ್ದರೂ ನಾವು ಎನ್‍ಡಿಎ ಸರ್ಕಾರವೆಂದೇ ಪರಿಗಣಿಸುತ್ತೇವೆ. ನಮ್ಮ ಮೈತ್ರಿ ಪಕ್ಷಗಳನ್ನು ಜೊತೆಯಾಗಿಯೇ ಕರೆದುಕೊಂಡು ಸಾಗುತ್ತೇವೆ ಎಂದು ಹೇಳಿದರು.
Advertisement
ಬಿಜೆಪಿಯು ಈ ಬಾರಿ ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ. ಇತ್ತ ಉತ್ತರ ಪ್ರದೇಶದಲ್ಲಿಯೂ ನಿಮ್ಮ ನಿರೀಕ್ಷೆಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳುವ ಮೂಲಕ ಬಿಜೆಪಿ ಹೇಗೆ ಬಹುಮತ ಸಾಧಿಸುತ್ತದೆ ಅಂತ ವಿವರಿಸಿದರು.
ಯುಪಿಎ ಸರ್ಕಾರದಲ್ಲಿ ಅನೇಕ ಹಗರಣಗಳು ನಡೆದಿದ್ದವು. ಹೀಗಾಗಿ ಜನರು 2014ರಲ್ಲಿ ಎನ್‍ಡಿಎ ನೇತೃತ್ವಕ್ಕೆ ಬೆಂಬಲ ನೀಡಿದರು. ನಾವು ಮಾಡಿದ ಸಾಧನೆಗಳನ್ನು ಗುರುತಿಸಿ ಜನರು ನಮ್ಮನ್ನ ಮತ್ತೆ ಆಯ್ಕೆ ಮಾಡುತ್ತಾರೆ. ಕೃಷಿ, ನೀರಾವರಿ, ಆರ್ಥಿಕ ಬೆಳವಣಿಗೆ, ಮೂಲ ಸೌಕರ್ಯ, ಜನಧನ್ ಯೋಜನೆ, ರಸ್ತೆ ಸೇರಿದಂತೆ ಅನೇಕ ವಿಷಯಗಳನ್ನು ಜನರು ಗಮನಿಸಿದ್ದಾರೆ ಎಂದು ತಿಳಿಸಿದರು.
ರಾಜೀವ್ ಗಾಂಧಿಯವರು ನಂಬರ್ 1 ಭ್ರಷ್ಟರಾಗಿಯೇ ಪ್ರಾಣಬಿಟ್ಟರು ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು, ಮೋದಿ ಅವರನ್ನು ಚೌಕಿದಾರ್ ಚೋರ್ ಹೈ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆ ಮಾಡಿದರು. ಇದಕ್ಕೆ ಪ್ರತ್ಯುತ್ತರ ನೀಡಲು ರಾಜೀವ್ ಗಾಂಧಿಯವರ ಹೆಸರನ್ನು ತೆಗೆದುಕೊಂಡರು ಎಂದು ಸ್ಪಷ್ಟನೆ ನೀಡಿದರು.
ಚೌಕಿದಾರ್ ಚೋರ್ ಹೈ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕ್ಷಮೆ ಕೇಳದಿರಲು ಭಾರೀ ಬುದ್ಧಿವಂತಿಕೆ ತೋರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ನಿರುದ್ಯೋಗ ಒಂದು ರೀತಿ ಸೈತಾನ್ (ದೆವ್ವ) ಇದ್ದಂತೆ. 5 ವರ್ಷಗಳಲ್ಲಿ ಅದನ್ನು ಕಿತ್ತು ಹಾಕಲು ಸಾಧ್ಯವಿಲ್ಲ. ಹಂತ ಹಂತವಾಗಿ ಉದ್ಯೋಗ ಸೃಷ್ಟಿಸುತ್ತಿದ್ದೇವೆ ಎಂದು ತಿಳಿಸಿದರು.