ಬೆಂಗಳೂರು: ಕರ್ನಾಟಕದ ರಾಜಕಾರಣಿಗಳ ಪೈಕಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅತ್ಯಂತ ಬುದ್ಧಿವಂತ ರಾಜಕಾರಣಿ. ತಮ್ಮ ರಾಜಕೀಯ ಜೀವನದುದ್ದಕ್ಕೂ ಕೇವಲ 4-5 ವರ್ಷ ಮಾತ್ರ ಅಧಿಕಾರ ನಡೆಸಿರುವ ದೊಡ್ಡಗೌಡ್ರು, ರಾಜಕೀಯ ಚದುರಂಗದ ಆಟದಲ್ಲಿ ಸದಾ ಬ್ಯುಸಿ ಆಗಿರುತ್ತಾರೆ.
ವಯಸ್ಸು 87 ಆದರೂ ದೇವೇಗೌಡರ ಉತ್ಸಾಹ ಮಾತ್ರ ಇದುವರೆಗೂ ಕಡಿಮೆ ಆಗಿಲ್ಲ. ಸೋತರೂ ಮನೆಯಲ್ಲಿ ಕೂರದ ದೇವೇಗೌಡರು, ರಾಜಕೀಯ ಚಟುವಟಿಕೆಗಳಲ್ಲಿ ಮುಂದಿದ್ದಾರೆ. ಆದರೆ ದೇವೇಗೌಡರ ವಿರೋಧಿಗಳು ಅವರ ವಯಸ್ಸನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಹೀಗೆ ರಾಜಕೀಯ ಮಾಡೋರಿಗೆ ನಾನು ಫಿಟ್ ಆ್ಯಂಡ್ ಫೈನ್ ಅಂತ ಹೆಚ್‍ಡಿಡಿ ಗುಡುಗಿದ್ದಾರೆ.
ದಾಸರಹಳ್ಳಿ ಕ್ಷೇತ್ರದಲ್ಲಿ ನಡೆದ ಸಿಎಎ ವಿರುದ್ಧ ಪ್ರತಿಭಟನೆಯ ವೇಳೆ ಮಾತನಾಡಿ, ನಾನು ಫಿಟ್ ಅಂತ ಪದೇ ಪದೇ ಹೇಳಿದ್ದಾರೆ. ದೇವೇಗೌಡ ಸೋತು ಮನೆಯಲ್ಲಿ ಕುಳಿತುಕೊಳ್ಳುತ್ತಾನೆ ಅಂದುಕೊಳ್ಳಬೇಡಿ. ನನ್ನ ಹೋರಾಟ ಯಾವತ್ತೂ ನಿಲ್ಲೋದಿಲ್ಲ ಎಂದು ಎಚ್ಚರಿಸಿದ್ದಾರೆ.
ಕೇರಳದಲ್ಲಿ ನಾನು ಚಿಕಿತ್ಸೆ ಪಡೆದು ಬಂದಿದ್ದೇನೆ. ಒಂದು ತಿಂಗಳು ರೆಸ್ಟ್ ಮಾಡಬೇಕು ಅಂತ ವೈದ್ಯರು ಹೇಳಿದ್ದಾರೆ. ಆದರೆ ಈ ವ್ಯವಸ್ಥೆ ವಿರುದ್ಧ ಹೋರಾಟ ಅವಶ್ಯಕವಾಗಿದೆ. ಹೀಗಾಗಿ ನಾನು ಒಂದು ನಿಮಿಷ ವಿರಮಿಸದೇ, ಅರೋಗ್ಯವನ್ನೂ ಲೆಕ್ಕಿಸದೇ ಕೆಲಸ ಮಾಡುತ್ತಿದ್ದೇನೆ ಅನ್ನೊ ಮೂಲಕ ನಾನು ಹೋರಾಟಕ್ಕೆ ಫಿಟ್ ಅಂತ ಹೇಳಿದ್ದಾರೆ.