– ಎಂಬಿಪಿ ಬಿಜೆಪಿಗೆ ಬಂದ್ರೆ ಅವ್ರ ಪರ ನಾನು ನಿಲ್ತೀನಿ
– ಸಿಎಂ ಆಗಲು ನನಗೆ ಅರ್ಹತೆ ಇದೆ
ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷಕ್ಕೆ ಸ್ಥಾನಕ್ಕೆ ನಾನು ಟವೆಲ್ ಹಾಕಿದ್ದೇನೆ. ಹಾಗೇ ಉತ್ತರ ಕರ್ನಾಟಕದಿಂದ ಮುಖ್ಯಮಂತ್ರಿಯಾಗಲು ನನಗೂ ಅರ್ಹತೆ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಶಾಸಕರು, ನನ್ನ ವಿರುದ್ಧ ಯಾವುದೇ ಹಗರಣ, ಪ್ರಕರಣ ದಾಖಲಾಗಿಲ್ಲ. ಹೀಗಾಗಿ ನಾನು ಕೂಡ ಸಿಎಂ ಅಭ್ಯರ್ಥಿಯಾಗಲು ಅರ್ಹನಾಗಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬದುಕಿರುವವರೆಗೂ ಅವರೇ ಮುಖ್ಯಮಂತ್ರಿ ಆಗುತ್ತಾರೆ. ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಹೈಕಮಾಂಡ್ ರಾಜ್ಯ ನಾಯಕರಿಂದ ಮಾಹಿತಿ ಪಡೆದಿದೆ. ಯಡಿಯೂರಪ್ಪ ಅವರ ನಂತರ ನಾನೇ ಡೈನಾಮಿಕ್ ಲೀಡರ್ ಎಂದು ಹೇಳಿದರು.
ಮಂತ್ರಿಗಿರಿ ನೀಡಲಿಲ್ಲ ಅಂತ ಗೃಹ ಸಚಿವ ಎಂ.ಬಿ.ಪಾಟೀಲ್ ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡಿದ್ದರು. ಆಗ ಅವರನ್ನು ಬಿಜೆಪಿಗೆ ತರುವ ಪ್ರಯತ್ನ ಮಾಡಿದ್ದೇವು. ಬಿಜೆಪಿಗೆ ಬಂದರೆ ಸಚಿವರಿಗೆ ಉತ್ತಮ ಭವಿಷ್ಯವಿದೆ ಎಂದರು.
ಎಂ.ಬಿ.ಪಾಟೀಲ್ ಅವರು ಬಿಜೆಪಿಗೆ ಬರಲಿ. ಸಚಿವರ ಪರವಾಗಿ ನಾನು ನಿಲ್ಲುತ್ತೇನೆ. ನನಗೆ ಮಂತ್ರಿ ಸ್ಥಾನ ಬೇಡ. ಎಂ.ಬಿ.ಪಾಟೀಲರಿಗೆ ಬೇಕಾಗಿರುವ ನೀರಾವರಿ ಖಾತೆ ಜೊತೆಗೆ ಬೇರೆ ಖಾತೆಗೂ ಲಾಬಿ ಮಾಡುತ್ತೇನೆ. ಆದರೆ ಉತ್ತರ ಕರ್ನಾಟಕದ ಸಿಎಂ ಅಭ್ಯರ್ಥಿ ನಾನೇ ಎಂದು ತಿಳಿಸಿದರು.