ಬೆಳಗಾವಿ: ಉತ್ತರ ಕರ್ನಾಟಕದ 4 ಜನ ಕಾಂಗ್ರೆಸ್ ಶಾಸಕರಿಗೆ ಮಾತ್ರ ಮಂತ್ರಿಗಿರಿ ನೀಡಿ, ಈ ಭಾಗದ ಶಾಸಕರಿಗೆ ಅನ್ಯಾಯ ಮಾಡಲಾಗಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಸಚಿವರು, ಉತ್ತರ ಕರ್ನಾಟಕದಲ್ಲಿ ಒಟ್ಟು 40 ಜನ ಶಾಸಕರಿದ್ದಾರೆ. ಆದರೆ ಕೇವಲ 4 ಜನರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದ್ದು, ಉತ್ತರ ಕರ್ನಾಟಕದ ಶಾಸಕರಿಗೆ ಸಂಪುಟದಲ್ಲಿ ಅನ್ಯಾಯ ಮಾಡಲಾಗಿದೆ. ಈ ಕೂಡಲೇ ಕಾಂಗ್ರೆಸ್ ಪಕ್ಷದ ನಾಯಕರು ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವ ಕಾಲ ಇನ್ನೂ ಕೂಡಿಬಂದಿಲ್ಲ. ದಕ್ಷಿಣ ಕರ್ನಾಟಕದಷ್ಟೇ ಪ್ರಾಮುಖ್ಯತೆ, ಅಧಿಕಾರ ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕಕ್ಕೂ ಸಿಗಬೇಕು. ಮುಂದೆ ಯಾವುದೇ ಸರ್ಕಾರ ಬಂದರೂ ಇಂತಹ ಅನ್ಯಾಯ ಆಗಬಾರದು. ಉತ್ತರ ಕರ್ನಾಟಕದ ಭಾಗದಲ್ಲಿ ನಾಯಕತ್ವದ ಕೊರತೆಯಿದೆ. ಹೀಗಾಗಿ ಪದೇ ಪದೇ ಅನ್ಯಾಯವಾಗುತ್ತಿದೆ. ಕಾಂಗ್ರೆಸ್ ಸಂಸದೀಯ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಅವರು ಬೆಳೆದಂತೆ ಅನೇಕರು ಈ ಭಾಗದಲ್ಲಿ ಬೆಳೆಯಬೇಕು. ಆದರೆ ಈಗ ಸಚಿವ ಸ್ಥಾನ ಹಂಚಿಕೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯ ಒದಗಿಸಲು ನಾನು ಬದ್ಧವಾಗಿರುವೆ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದಿಂದ ನನಗೆ ಕೆಪಿಸಿಸಿ ಅಧ್ಯಕ್ಷನಾಗುವ ಅವಕಾಶವಿತ್ತು. ಆದರೆ ಸದ್ಯಕ್ಕೆ ನಾನೇ ಬೇಡವೆಂದು, ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಒಪ್ಪಿಕೊಳ್ಳುವುದಾಗಿ ಹೇಳಿರುವೆ. ಕೆಪಿಸಿಸಿ ಅಧ್ಯಕ್ಷರು ಯಾರೇ ನೇಮಕಗೊಂಡರು ಅವರಿಗೆ ನನ್ನ ಬೆಂಬಲವಿದೆ. ಕೆಪಿಸಿಸಿ ಅಧ್ಯಕ್ಷರಾದರೆ 5 ವರ್ಷ ರಾಜ್ಯ ಸುತ್ತಬೇಕು, ಪಕ್ಷ ಸಂಘಟನೆ ಮಾಡಬೇಕು. ಆದರೆ ಅಧ್ಯಕ್ಷ ಸ್ಥಾನದಲ್ಲಿದ್ದು, ಪಕ್ಷ ಸಂಘಟನೆ ಮಾಡುವ ಅವಶ್ಯಕತೆ ನನಗಿಲ್ಲ. ಸತೀಶ್ ಜಾರಕಿಹೊಳಿ ಅಂದ್ರೆ ಯಾರು ಅಂತಾ ರಾಜ್ಯದ ಜನರಿಗೆ ಗೊತ್ತಿದೆ ಎಂದು ಕಾಂಗ್ರೆಸ್ಸಿನ ಕೆಲ ನಾಯಕರಿಗೆ ಟಾಂಗ್ ಕೊಟ್ಟರು. ನಿಗಮ ಮಂಡಳಿಗೆ ಬೆಂಬಲಿಗರ ನೇಮಕ ವಿಚಾರವಾಗಿ ಪಟ್ಟಿ ಸಿದ್ಧವಾಗಿದೆ. ಅದನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.