ಕಲಬುರಗಿ: ಲೋಕಸಭಾ ಚುನಾವಣೆಯ ಫಲಿತಾಂಶ ಬರುವುದಕ್ಕೂ ಮೊದಲೇ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದ್ದು ಈಗ ನಾನು ಸಹ ಆಕಾಂಕ್ಷಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ. ಯಾಕಂದ್ರೆ ಉತ್ತರ ಕರ್ನಾಟಕ ಬಿಜೆಪಿಯ ಭದ್ರಕೋಟೆಯಾಗಿದೆ. ಹೀಗಾಗಿ ಈ ಭಾಗಕ್ಕೆ ರಾಜ್ಯಾಧ್ಯಕ್ಷ ಸ್ಥಾನ ಸಿಗಬೇಕಿದೆ ಎಂದರು.
ಯಾವುದೇ ಒಂದು ಪ್ರದೇಶವನ್ನು ಯಾರಿಗೂ ಗುತ್ತಿಗೆ ಕೊಟ್ಟಿಲ್ಲ. ಮೈತ್ರಿ ಸರ್ಕಾರ ಮುಂದುವರಿದರೆ ಕಾಂಗ್ರೆಸ್ ಸಂಪೂರ್ಣ ನಾಶ ಆಗುತ್ತದೆ ಎನ್ನುವುದು ಈಗಾಗಲೇ ಕಾಂಗ್ರೆಸ್‍ಗೆ ಮನವರಿಕೆಯಾಗಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯರನ್ನ ರಾಜಕೀಯವಾಗಿ ಮುಗಿಸುವ ತಂತ್ರ ರೂಪಿಸಲು ಮುಂದಾಗಿದ್ದಾರೆ. ಸರ್ಕಾರ ಬೀಳಿಸಲು ನಾವು ಪ್ರಯತ್ನ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಎಂಬಿ ಪಾಟೀಲ್ ಮನಸ್ಸು ಮಾಡಿದ್ರೆ ಯತ್ನಾಳ್ ಕಾಂಗ್ರೆಸ್ ಕರೆತರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಕೂಡ ಮನಸ್ಸು ಮಾಡಿದರೆ ಎಂಬಿ ಪಾಟೀಲ್ ರನ್ನ ಬಿಜೆಪಿಗೆ ಕರೆತರುತ್ತೇನೆ. ಆದರೆ ಅವರು ಕಾಂಗ್ರೆಸ್ ನಲ್ಲೇ ಇರಲಿ ಎಂದು ಸುಮ್ಮನಾಗಿದ್ದೇನೆ ಎಂದರು.
ಕಾಂಗ್ರೆಸ್‍ನ ಶಾಸಕರಿಗೆ ಕುಮಾರಸ್ವಾಮಿ ಯಾವುದೇ ಅನುದಾನ ನೀಡುತ್ತಿಲ್ಲ ಎಂಬ ಅಸಮಾಧಾನ ಇದೆ. ನನ್ನ ಕೆಲಸ ಏನಿದ್ದರೂ ಡೈರೆಕ್ಟ್ ಹಿಟ್ ಹಿಂದೆ ತೆರೆ ಮರೆಯಲ್ಲಿ ಕೆಲಸ ಮಾಡುವುದಿಲ್ಲ. ಹಾಗೆಯೇ ತೆರೆ ಮರೆಯಲ್ಲಿ ಕೆಲಸ ಮಾಡಿದರೆ ಯಾವತ್ತೋ ನಾನು ಮುಖ್ಯಮಂತ್ರಿ ಆಗುತ್ತಿದ್ದೆ ಎಂದು ಯತ್ನಾಳ್ ಹೇಳಿದರು.