– ಮೋದಿ ಇಲ್ಲದಿದ್ದರೆ ನಾನು ಝೀರೋ
ಮೈಸೂರು: ನನ್ನ ಜೀವ ಇರುವವರೆಗೂ ನಾನು ಮೋದಿ ಭಕ್ತ. ನಾನು ಪಕ್ಷದ ಕಟ್ಟಾಳು. ಯಾರು ಏನೇ ಕೊಡ್ತೀನಿ ಅಂದರೂ ನಾನು ಎಲ್ಲೂ ಹೋಗಲ್ಲ. ಸಾಯೋವರೆಗೂ ನಾನು ಬಿಜೆಪಿ ಕಾರ್ಯಕರ್ತ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದ್ದಾರೆ.
ಸಂಸದ ಪ್ರತಾಪ್ ಸಿಂಹಗೆ ಪತ್ರಕರ್ತರ ಭವನದಲ್ಲಿ ಅಭಿನಂದನಾ ಸಮಾರಂಭ ನಡೆಯಿತು. ಬಳಿಕ ಮಾತನಾಡಿದ ಅವರು, ಮೋದಿಜೀ ಗೆ ನನಗೆ ಸದಾ ಪ್ರೇರಣೆ, ಸ್ಪೂರ್ತಿ. ಮೋದಿಜಿ ಏನೇ ನಿರ್ಧಾರ ತೆಗೆದು ಕೊಂಡರು ನಾನು ಅದನ್ನು ಸ್ವೀಕರಿಸುತ್ತೇನೆ. ಮೋದಿಗಿಂತ ದೊಡ್ಡದು ಯಾವುದೂ ಇಲ್ಲ. ಅವಕಾಶ ಮಾಡಿಕೊಟ್ಟರು ತೃಪ್ತಿ ಇದೆ. ಮಾಡದೆ ಇದ್ದರೂ ತೃಪ್ತಿ ಇದೆ. ಟಿಕೆಟ್ ವಿಚಾರದಲ್ಲಿ ಯಡಿಯೂರಪ್ಪ ಅವರನ್ನು ಎಳೆದು ತರಬೇಡಿ ಎಂದು ಮನವಿ ಮಾಡಿಕೊಂಡರು.
ಯಡಿಯೂರಪ್ಪ ಅವರು ಪಕ್ಷ ಕಟ್ಟದೆ ಇದ್ದರೆ ಕರ್ನಾಟಕದಲ್ಲಿ ಬಿಜೆಪಿ ಎಲ್ಲಿ ಇರುತ್ತಿತ್ತು?. ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಜೆಪಿಯನ್ನು ಯಡಿಯೂರಪ್ಪ ಅವರು ಕಟ್ಟದೆ ಇದ್ದರೆ ನಮ್ಮಂಥವರು ಸಂಸದ ಆಗೋದಿಕ್ಕೆ ಆಗುತ್ತಿತ್ತಾ?. ಕರ್ನಾಟಕಕ್ಕೆ ಯಡಿಯೂರಪ್ಪ ಅವರು ಒಂಥರ ಮೋದಿ ಇದ್ದ ರೀತಿ ಎಂದರು.
ಟಿಕೆಟ್ ತಪ್ಪಿದ್ರೂ ಬೇಸರಿಸಬೇಡಿ: ಟಿಕೆಟ್ ಕೊಟ್ಟರೆ ಸಂಸದನಾಗಿ ಕೆಲಸ ಮಾಡ್ತೀನಿ. ಮಹಾರಾಜರಿಗೆ ಕೊಟ್ಟರೆ ಕಾರ್ಯಕರ್ತನಾಗಿ ಕೆಲಸ ಮಾಡ್ತೀನಿ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರು ಅವರನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಜವಾಬ್ದಾರಿ. ನಾನೇನೂ ಸಾಯುವವರೆಗೂ ಪಾಲಿಟಿಕ್ಸ್ ಮಾಡಲು ಬಂದಿಲ್ಲ. ಇದೇ ನನ್ನ ಕೊನೆ ಚುನಾವಣೆ ಅಂತಾ ಹೇಳಿದ್ದೆ. ಅವಕಾಶ ಸಿಕ್ಕರೆ ಕೆಲಸ ಮಾಡ್ತಿನಿ. ನಾನು ಸತ್ತ ಮೇಲೂ ಮೈಸೂರಿನ ಜನ ನನ್ನ ನೆನಪಿಟ್ಟು ಕೊಳ್ಳುವಂತಾ ಕೆಲಸ ಮಾಡಿದ್ದೇನೆ. ನನಗೆ ಆಕಸ್ಮಾತ್ ಟಿಕೆಟ್ ತಪ್ಪಿದರು ಬೇಸರ ಪಟ್ಟುಕೊಳ್ಳಬೇಡಿ. ನಾವೆಲ್ಲಾ ಜೊತೆಯಾಗಿ ಇದ್ದು ಕೆಲಸ ಮಾಡೋಣ ಎಂದು ಹೇಳಿದರು.
ಇದೇ ವೇಳೆ ಪ್ರತಾಪ್ ಸಿಂಹ ಹೆಸರು ಕೆಡಿಸಿಕೊಂಡಿದ್ದಕ್ಕೆ ಟಿಕೆಟ್ ತಪ್ಪುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನಿಡಿದ ಸಿಂಹ, 2018 ರಲ್ಲಿ ಹೆಸರು ಕೆಡಿಸಿಕೊಂಡಿದ್ದಕ್ಕೆ ಇಲ್ಲಿ ಸೋತು, ಬಾದಾಮಿಗೆ ಹೋದ್ರಾ?, ನಂತರ ಬಾದಾಮಿಯಲ್ಲಿ ಹೆಸರು ಕೆಡಿಸಿ ಕೊಂಡಿದ್ದಕ್ಕೆ ಇಲ್ಲಿಗೆ ಬಂದ್ರಾ ಎಂದು ಪ್ರಶ್ನಿಸಿದರು.
ಭಾಷಣದ ನಡುವೆ ಸಂಸದರಿಗೆ ಮೊಬೈಲ್ ಕರೆಯೊಂದು ಬಂದಿದೆ. ಈ ವೇಳೆ ಭಾಷಣ ಮೊಟಕುಗೊಳಿಸಿ ಕರೆ ಸ್ವೀಕರಿಸಿ ವೇದಿಕೆಯಿಂದ ಎದ್ದು ಹೋದ ಪ್ರತಾಪ್ ಸಿಂಹ, ಗೌಪ್ಯವಾಗಿ ಮಾತನಾಡಿಕೊಂಡು ಬಂದರು. ಬಳಿಕ ಮುಖ್ಯ ಕರೆಯಾಗಿರುವುದರಿಂದ ಎದ್ದು ಹೋದೆ ಎಂದು ಬಳಿಕ ಕ್ಷಮೆ ಕೇಳಿದರು.