ನವದೆಹಲಿ: ದೇಶದ ಮೊದಲ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್‍ಯುವಿ) ಕಾರು ಬಿಡುಗಡೆಯಾಗಿದೆ. ದಕ್ಷಿಣ ಕೊರಿಯಾದ ಹುಂಡೈ ಕಂಪನಿ ಕೋನಾ ಹೆಸರಿನ ಕಾರನ್ನು ಬಿಡುಗಡೆ ಮಾಡಿದೆ.
ವಿಶ್ವದ ಮೊದಲ ಎಸ್‍ಯುವಿ ಇದಾಗಿದ್ದು, 2018ರ ಮೊದಲಾರ್ಧ ಈ ಕಾರು ದಕ್ಷಿಣ ಕೊರಿಯಾದಲ್ಲಿ ಬಿಡುಗಡೆಯಾಗಿ ಈಗ ವಿಶ್ವದ ಹಲವು ದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ಕೋನಾ ಕಾರು ದಕ್ಷಿಣ ಕೊರಿಯಾದಲ್ಲೇ ಉತ್ಪಾದನೆಯಾಗಿದ್ದು ಮುಂದಿನ ದಿನಗಳಲ್ಲಿ ಭಾರತದಲ್ಲಿ ಉತ್ಪಾದನೆಯಾಗಲಿದೆ.
Advertisement
Advertisement
39.2 ಕಿಲೋ ವ್ಯಾಟ್ ಮತ್ತು 64 ಕಿಲೋ ವ್ಯಾಟ್ ಬ್ಯಾಟರಿ ಆವೃತ್ತಿಯಲ್ಲಿ ಕೋನಾ ಕಾರನ್ನು ಹುಂಡೈ ಪರಿಚಯಿಸಿದ್ದರೆ, ಭಾರತದಲ್ಲಿ 39.2 ಕಿಲೋ ವ್ಯಾಟ್ ಲಿಥಿಯಾಂ ಆಯಾನ್ ಬ್ಯಾಟರಿಯ ಕಾರನ್ನು ಮಾತ್ರ ಪರಿಚಯಿಸಿದೆ. ಈ ಕಾರಿಗೆ 25,30,000 ರೂ. ದರವನ್ನು ನಿಗದಿ ಪಡಿಸಿದೆ.
Advertisement
ಸಾಧಾರಣವಾಗಿ ಸಣ್ಣ ಬ್ಯಾಟರಿ ಇರುವ ಎಲೆಕ್ಟ್ರಿಕ್ ಕಾರುಗಳು 312 ಕಿ.ಮಿ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದರೆ ದೊಡ್ಡ ಬ್ಯಾಟರಿ ಹೊಂದಿರುವ ಕಾರುಗಳು ಅಂದಾಜು 500 ಕಿ.ಮೀ ಕ್ರಮಿಸುವ ಸಾಮಥ್ರ್ಯ ಹೊಂದಿರುತ್ತದೆ. ಆದರೆ ಭಾರತದಲ್ಲಿ ಬಿಡುಗಡೆಯಾಗಿರುವ 39.2 ಕೆವಿ ಕೋನಾ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 452 ಕಿ.ಮೀ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಅಟೋಮೊಟಿವ್ ರಿಸರ್ಚ್ ಅಸೋಶಿಯೇಷನ್ ಆಫ್ ಇಂಡಿಯಾ(ಎಆರ್‌ಎಐ) 452 ಕಿ.ಮೀ ಸಂಚರಿಸುವ ಬಗ್ಗೆ ಪ್ರಮಾಣ ಪತ್ರವನ್ನು ನೀಡಿದೆ.
Advertisement
ಡಿಸಿ ಕ್ವಿಕ್ ಚಾರ್ಜರ್ ಮೂಲಕ 57 ನಿಮಿಷದಲ್ಲಿ ಫಾಸ್ಟ್ ಚಾರ್ಜರ್ ನಿಂದ ಶೇ.82ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಇಂಡಿಯನ್ ಆಯಿಲ್ ಕಂಪನಿಯ ಜೊತೆ ಸಹಭಾಗಿತ್ವದಲ್ಲಿ ದೇಶದ ಮಹಾನಗರಗಳಾದ ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿಯಲ್ಲಿ ಡಿಸಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಹುಂಡೈ ತಿಳಿಸಿದೆ.
9.7 ಸೆಕೆಂಡಿನಲ್ಲಿ 0 ಯಿಂದ 100 ಕಿ.ಮೀ ವೇಗಕ್ಕೆ ತಲುಪಬಹುದು. 8 ವರ್ಷ ಮತ್ತು 1.60 ಲಕ್ಷ ಕಿ.ಮೀ ದೂರದವರೆಗೆ ಈ ಬ್ಯಾಟರಿ ಬಾಳಿಕೆ ಬರಲಿದೆ ಎಂದು ಕಂಪನಿ ತಿಳಿಸಿದೆ.
ಗ್ರಾಹಕರಿಗೆ ಎರಡು ಚಾರ್ಜರ್ ನೀಡಲಾಗುತ್ತದೆ. ಒಂದು ಪೋರ್ಟಬಲ್ ಚಾರ್ಜರ್ ಮತ್ತು ಎಸಿ ವಾಲ್ ಬಾಕ್ಸ್ ಚಾರ್ಜರ್ ಅನ್ನು ಕಂಪನಿ ನೀಡುತ್ತದೆ. ಪೋರ್ಟಬಲ್ ಚಾರ್ಜರ್ ಯಾವುದೇ 3 ಪಿನ್ ಎಎಂಪಿ ಸಾಕೆಟ್ ಗೆ ಹಾಕಿದರೆ ಪ್ರತಿದಿನ 3 ಗಂಟೆ ಚಾರ್ಜ್ ಮಾಡಿದರೆ 50 ಕಿ.ಮೀ ಸಂಚರಿಸಬಹುದು. ಎಸಿ ವಾಲ್ ಬಾಕ್ಸ್ ಚಾರ್ಜರ್(7.2 ಕಿಲೋ ವ್ಯಾಟ್) ಮೂಲಕ ಒಂದು ಗಂಟೆ ಚಾರ್ಜ್ ಮಾಡಿದರೆ 50 ಕಿ.ಮೀ ಕ್ರಮಿಸಬಹುದು. 6 ಗಂಟೆ ಹಾಕಿದರೆ ಫುಲ್ ಚಾರ್ಜ್ ಆಗುತ್ತದೆ.
ಮುಂದಿನ ವರ್ಷ 500 ಕಿ.ಮೀ ವರೆಗೆ ಕ್ರಮಿಸುವ ಕಾರನ್ನು ಅಭಿವೃದ್ಧಿ ಪಡಿಸಲಾಗುವುದು. 2025ರ ಒಳಗಡೆ ದೇಶದಲ್ಲಿ 23 ಎಲೆಕ್ಟ್ರಿಕಲ್ ವಾಹನಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಹುಂಡೈ ಕಂಪನಿ ತಿಳಿಸಿದೆ.
5 ಜನ ಕುಳಿತುಕೊಳ್ಳಬಹುದಾದ ಎಸ್‍ಯುವಿ 134 ಬಿಎಚ್‍ಪಿ ಎಂಜಿನ್, ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಹೊಂದಿದೆ. 4180 ಮಿ.ಮೀ ಉದ್ದ, 1800 ಮಿ.ಮೀ ಅಗಲ, 1570 ಮಿ.ಮೀ ಎತ್ತರ ಹೊಂದಿದೆ. 7 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನೆಮೆಂಟ್ ಸಿಸ್ಟಂ ಇದ್ದು, ಆಪಲ್ ಕಾರು ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಪೋರ್ಟ್ ಮಾಡುತ್ತದೆ.
ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಭಾರತವನ್ನು ಗ್ಲೋಬಲ್ ಹಬ್ ಮಾಡುವತ್ತ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದರು.
Drive into the future with India’s First All – Electric SUV. Unleashing the stylish #KONAElectric, with a 452km range per full charge. Eco-friendly and packed with power*, the #KONAElectric truly delivers an electric performance! Test Drive today! pic.twitter.com/cq9M2TtH1v
— Hyundai India (@HyundaiIndia) July 9, 2019
ಎಲೆಕ್ಟ್ರಿಕ್ ವಾಹನದ ಮೇಲಿನ ಜಿಎಸ್‍ಟಿಯನ್ನು ಶೇ.12ರಿಂದ ಶೇ.5ಕ್ಕೆ ಇಳಿಕೆ ಮಾಡುವಂತೆ ಈಗಾಗಲೇ ಜಿಎಸ್‍ಟಿ ಕೌನ್ಸಿಲ್ ಬಳಿ ಕೇಂದ್ರ ಕೇಳಿಕೊಂಡಿದೆ. ಎಲೆಕ್ಟ್ರಿಕ್ ವಾಹನ ಖರೀದಿಗೆ ವಿನಿಯೋಗಿಸಿದ ಸಾಲದ ಮೇಲಿನ ಬಡ್ಡಿಯಲ್ಲಿ 1.5 ಲಕ್ಷ ರೂ. ಆದಾಯ ತೆರಿಗೆ ವಿನಾಯಿತಿಯನ್ನೂ ಹೆಚ್ಚುವರಿಯಾಗಿ ನೀಡಿದೆ.