ಹೈದರಾಬಾದ್: ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್ (ODI World Cup) ಟೂರ್ನಿಗೆ ಇನ್ನು ಒಂದೂವರೆ ತಿಂಗಳಷ್ಟೇ ಬಾಕಿಯಿದೆ. ಇದೇ ಮೊದಲ ಬಾರಿಗೆ ಭಾರತದ ಸಂಪೂರ್ಣ ಆತಿಥ್ಯದಲ್ಲಿ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು ಯಾವುದೇ ಅಡೆತಡೆಗಳು ಉಂಟಾಗದಂತೆ ಬಿಸಿಸಿಐ (BCCI) ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದ್ರೆ ಭದ್ರತೆಯ ಕೊರತೆಯಿಂದಾಗಿ ವೇಳಾಪಟ್ಟಿ ಬದಲಾವಣೆಗೆ ಒತ್ತಾಯಗಳು ಕೇಳಿಬರುತ್ತಲೇ ಇವೆ.
ಎರಡು ವಾರಗಳ ಹಿಂದೆಯಷ್ಟೇ ಬಿಸಿಸಿಐ ಅ.15 ರಂದು ಅಹಮದಾಬಾದ್‌ನಲ್ಲಿ ನವರಾತ್ರಿ ಉತ್ಸವ ಆರಂಭದ ದಿನವಾದ್ದರಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಅ.14ಕ್ಕೆ ಬದಲಾವಣೆ ಮಾಡಿದೆ. ಹಾಗೆಯೇ ನವೆಂಬರ್ 12 ರಂದು ಕಾಳಿ ಪೂಜೆ ಹಬ್ಬ ಇರುವುದರಿಂದ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯವನ್ನ ನವೆಂಬರ್ 11 ರಂದು ನಡೆಸಲು ತೀರ್ಮಾನಿಸಲಾಗಿದೆ. ಈ ನಡುವೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (Hyderabad Cricket Association) ಬಿಸಿಸಿಐಗೆ ಹೊಸ ತಲೆನೋವು ತಂದಿದೆ. ಹೈದರಾಬಾದ್‌ನ ಅಧಿಕಾರಿಗಳು ಪಂದ್ಯಗಳ ದಿನಾಂಕ ಬದಲಾಯಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ICC WorldCup 2023: ಭಾರತ-ಪಾಕ್ ಸೇರಿದಂತೆ ಪ್ರಮುಖ ಪಂದ್ಯಗಳ ವೇಳಾಪಟ್ಟಿ ಬದಲು
ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಅಕ್ಟೋಬರ್ 9 ರಂದು ನ್ಯೂಜಿಲೆಂಡ್ ಮತ್ತು ನೆದರ್ಲೆಂಡ್ ನಡುವೆ ಪಂದ್ಯ ನಡೆಯಲಿದ್ದು, ಮರುದಿನ ಅದೇ ಸ್ಥಳದಲ್ಲಿ ಶ್ರೀಲಂಕಾ ಪಾಕಿಸ್ತಾನ ತಂಡವನ್ನ ಎದುರಿಸಲಿದೆ. ಈ ಸಂಬಂಧ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (HCA) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಮನವಿ ಮಾಡಿದ್ದು, ಸತತ ದಿನಗಳಲ್ಲಿ ವಿಶ್ವಕಪ್ ಪಂದ್ಯಗಳನ್ನ ಆಯೋಜಿಸುವುದು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: AsiaCup 2023: ಪಾಕಿಸ್ತಾನಕ್ಕೆ ಬರುವಂತೆ ಜಯ್‌ಶಾಗೆ ಆಹ್ವಾನ ಕೊಟ್ಟ PCB
ಹೈದರಾಬಾದ್ ಪೊಲೀಸರು ಸತತ ಎರಡು ದಿನಗಳು ನಡೆಯಲ್ಲಿರುವ ಎರಡು ಪಂದ್ಯಗಳಿಗೆ ಭದ್ರತೆ ಒದಗಿಸಲು ಸಾಧ್ಯವಿಲ್ಲ. ಹೀಗಾಗಿ ಪಂದ್ಯದ ದಿನಾಂಕವನ್ನು ಬದಲಿಸಬೇಕು ಎಂದು ಕೋರಿದ್ದಾರೆ. ಇದೀಗ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಮನವಿ ಮೇರೆಗೆ ಮತ್ತೊಮ್ಮೆ ವೇಳಾಪಟ್ಟಿ ಬದಲಾವಣೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ಎರಡು ಪಂದ್ಯಗಳ ಹೊರತಾಗಿ, ಈ ಮೈದಾನದಲ್ಲಿ ಅಕ್ಟೋಬರ್ 6 ರಂದು ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯ ಕೂಡ ನಡೆಯಲಿದೆ. ಈ ಮೈದಾನದಲ್ಲಿ ಟೀಂ ಇಂಡಿಯಾದ ಯಾವುದೇ ಪಂದ್ಯ ನಿಗದಿಪಡಿಸಲಾಗಿಲ್ಲ.
Web Stories